ಜೆಡಿಎಸ್ ಹಿರಿಯ ಮುಖಂಡ ವೈ.ಎಸ್.ವಿ ದತ್ತ ಕಳೆದ ಕೆಲ ದಿನಗಳಿಂದ ತಮ್ಮ ಫೇಸ್ ಬುಕ್ ಖಾತೆ ಮೂಲಕ ಎಸ್.ಎಸ್ ಎಲ್.ಸಿ ಮಕ್ಕಳಿಗೆ ಗಣಿತ ಪಾಠ ಮಾಡುತ್ತಿದ್ದರು. ಇದಕ್ಕೆ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದರು. ಅಲ್ಲದೆ ದತ್ತ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಸುರೇಶ್ ಕುಮಾರ್ ಅವರ ಪತ್ರಕ್ಕೆ ಮರು ಪತ್ರ ಬರೆದ ವೈ ಎಸ್ ವಿ ದತ್ತ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದಕೊಂಡ ದತ್ತ ಅವರು ಈ ರೀತಿ ಬರೆದಿದ್ದಾರೆ.
ನಾನು ನನ್ನ ಫೇಸ್ ಬುಕ್ ಖಾತೆಯ ಮೂಲಕ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನದ ಪಾಠ ಮಾಡುತ್ತಿರುವುದಕ್ಕೆ ತಾವು ನನ್ನ ಬಗ್ಗೆ ಸದಾಭಿಪ್ರಾಯ ವ್ಯಕ್ತಪಡಿಸಿ ನನಗೆ ಬರೆದಿರುವ ಈ ಪತ್ರ ನನಗೆ ತಲುಪಿತು.ರಾಜಾಜಿನಗರ ಬಡಾವಣೆಯಲ್ಲಿ ನಾನು ಮತ್ತು ನೀವು ಸುದೀರ್ಘ ಕಾಲದಿಂದ ಒಡನಾಡಿಗಳಾಗಿ ಬೆಳೆದು ಬಂದವರು. ಹಾಗಾಗಿ ನನ್ನ ಟ್ಯುಟೋರಿಯಲ್ಸ್ ದಿನಗಳನ್ನು ನೀವು ಚೆನ್ನಾಗಿ ಬಲ್ಲವರು.ಆದುದರಿಂದ ನಿಮ್ಮ ಈ ಭಾವನೆಗಳು ನನಗೆ ಪ್ರೋತ್ಸಾಹದಾಯಕವೆಂದೇ ನಾನು ಭಾವಿಸುವೆ.
ಫೇಸ್ ಬುಕ್ ಮೂಲಕ ಪಾಠ ಹೇಳತೊಡಗಿದ ಮೇಲೆ, ರಾಜ್ಯದ ಅನೇಕ ಜಿಲ್ಲೆಗಳಿಂದ ಗ್ರಾಮೀಣ ಭಾಗದ ಮಕ್ಕಳು ಮತ್ತು ಪೋಷಕರು ” ಕನ್ನಡದಲ್ಲೇ ಪಾಠ ಮಾಡಿ , ಕನ್ನಡದಲ್ಲೂ ಪಾಠ ಮಾಡುತ್ತಿರುವುದು ನಮಗೆ ಅನುಕೂಲವಾಗಿದೆ ,ಹೆಚ್ಚು ಹೆಚ್ಚು ಕನ್ನಡ ಪದಗಳನ್ನೇ ಬಳಸಿ” ಎಂದು ನನಗೆ ಫೋನ್ ಮಾಡುವುದರ ಮೂಲಕ ಹಾಗೂ ಫೇಸ್ ಬುಕ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದು ಕನ್ನಡ ಮಾಧ್ಯಮದ ಅನಿವಾರ್ಯತೆ ಹಾಗೂ ಅಗತ್ಯತೆ ಕಡೆಗೆ ನಮ್ಮನ್ನು ಚಿಂತಿಸುವಂತೆ ಮಾಡಿದೆ. ಕೆಲವು ಸಿದ್ಧಾಂತಗಳನ್ನು ಹೊರತುಪಡಿಸಿ ಬಹುತೇಕ ವಿಷಯಗಳಲ್ಲಿ ಸಮಾನ ಮನಸ್ಕರಾದ್ದರಿಂದ ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರಾಗಿ ನೀವು ಖಂಡಿತಾ ಪ್ರಯತ್ನಶೀಲರಾಗುವಿರಿ ಎಂಬ ವಿಶ್ವಾಸ ನನ್ನದು. ವೈಜ್ಞಾನಿಕವಾಗಿ ಮಾತೃಭಾಷಾ ಶಿಕ್ಷಣ ಒಳ್ಳೆಯದು ಎಂಬ ಅನೇಕ ವರದಿಗಳನ್ನು ನೋಡಿದ್ದೇನೆ. ಮೂಲತಃ ಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಇತ್ತೀಚಿನ ಆಂಧ್ರ ಉಚ್ಚ ನ್ಯಾಯಾಲಯ ಮಾತೃ ಭಾಷಾ ಮಾಧ್ಯಮದ ಬಗ್ಗೆ ನೀಡಿರುವ ತೀರ್ಪು ಸಮಾಧಾನ-ಸಂತಸ ತಂದಿದೆ.ಅದನ್ನು ನೀವು ಖಂಡಿತ ಗಮನಿಸಿಯೇ ಗಮನಿಸಿರುತ್ತೀರಿ.
ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ನಿಮ್ಮ ಕಾಳಜಿಯಿಂದ, ಮುತುವರ್ಜಿಯಿಂದ ಚಂದನ ವಾಹಿನಿಯಲ್ಲಿ ಪಾಠಗಳು ಪ್ರಸಾರವಾಗುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಇದಕ್ಕೆ ನಿಮಗೆ ಅಭಿನಂದನೆಗಳು ಹಾಗೂ ನೀವು ನನ್ನ ಬಗ್ಗೆ ಇಟ್ಟುಕೊಂಡಿರುವ ಸದ್ಭಾವನೆಗೆ ನಾನು ಕೃತಜ್ಞ.








