ಪಂಜಾಬ್ ಯುವ ಕ್ರಿಕೆಟಿಗರಿಗೆ ಮೆಂಟರ್ ಆಗಿರುವ ಯುವರಾಜ್ ಸಿಂಗ್ ಹೇಳಿದ್ದೇನು ?
ಯುವರಾಜ್ ಸಿಂಗ್ ಇಷ್ಟು ದಿನ ಸಾಮಾಜಿಕ ಜಾಲ ತಾಣದಲ್ಲಿ ಬಿಝಿಯಾಗಿದ್ದರು. ಕೋವಿಡ್-19 ಮತ್ತು ಲಾಕ್ ಡೌನ್ ಟೈಮ್ ನಲ್ಲಿ ಸಹ ಆಟಗಾರರ ಜೊತೆ ಚಾಟಿಂಗ್ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಈ ನಡುವೆ ಕೆಲವೊಂದು ವಿಚಾರಗಳಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಟೀಕೆಗೂ ಗುರಿಯಾಗಿದ್ರು. ಇದೀಗ ಯುವರಾಜ್ ಸಿಂಗ್ ಮೈದಾನಕ್ಕೆ ಇಳಿದಿದ್ದಾರೆ.
ಚಂಡಿಗಢದಲ್ಲಿ ಪಂಜಾಬ್ ತಂಡದ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಲು ಮುಂದಾಗಿದ್ದಾರೆ. ಯುವ ಪ್ರತಿಭೆಗಳಾದ ಶುಭ್ಮನ್ ಗಿಲ್, ಅನ್ಮೊಲ್ ಪ್ರೀತ್ ಮತ್ತು ಅಭಿಷೇಕ್ ಶರ್ಮಾ ಅವರ ಜೊತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಪುನೀತ್ ಬಾಲಿ ಅವರ ಮನವಿಯಂತೆ ಪಂಜಾಬ್ ತಂಡದ 21 ದಿನಗಳ ತರಬೇತಿ ಶಿಬಿರಕ್ಕೆ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಾನು ಈ ಜವಾಬ್ದಾರಿಯನ್ನು ಆನಂದಿಸುತ್ತಿದ್ದೇನೆ. ನಾನು ಕ್ರಿಕೆಟ್ ಆಡುತ್ತಿರುವಾಗ ನನಗೂ ಅದ್ಭುತವಾದ ಮೆಂಟರ್‍ಗಳಿದ್ದರು. ಆಟಗಾರರಿಗೆ ಅತ್ಯಾಧುನಿಕ ಮಟ್ಟದ ಸೌಲಭ್ಯಗಳನ್ನು ನೀಡಿರುವ ಬಗ್ಗೆ ಯುವರಾಜ್ ಸಿಂಗ್ ಖುಷಿಪಟ್ಟಿದ್ದಾರೆ. ಯುವಿ ಕೆಲವು ದಿನಗಳ ಹಿಂದೆ ಮೊಹಾಲಿ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದರು.
ಕ್ರಿಕೆಟ್ ಮತ್ತು ಸ್ಕೇಟಿಂಗ್ ಕ್ರೀಡೆಗಳನ್ನು ನಾನು ತುಂಬಾ ಇಷ್ಟಪಡುತ್ತೇನೆ. ಇದೀಗ ನನ್ನ ಬಳಿ ಸಾಕಷ್ಟು ಸಮಯವಿದೆ. ಈ ನಡುವೆ ಗಾಲ್ಫ್ ಕೂಡ ಆಡುತ್ತಿದ್ದೇನೆ. ಗಾಲ್ಫ್ ಅಂಗಣದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಯುವರಾಜ್ ಸಿಂಗ್ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಆ ನಂತರ ಅವರು ಗ್ಲೋಬಲ್ ಟಿ-ಟ್ವೆಂಟಿ ಕೆನಡಾ ಟೂರ್ನಿ, ಯುಎಇನಲ್ಲಿ ಟಿ-ಟೆನ್ ಲೀಗ್‍ನಲ್ಲಿ ಆಡಿದ್ದರು. ಆದ್ರೆ ಈ ವರ್ಷ ಏನು ಪ್ಲಾನ್ ಮಾಡಿಕೊಂಡಿಲ್ಲ. ಅಂತಾರಾಷ್ಟ್ರೀಯ ಲೀಗ್ ಟೂರ್ನಿಯನ್ನು ಆಡಲು ಇಚ್ಚಿಸುತ್ತಿದ್ದೇನೆ. ಕೋವಿಡ್-19ನಿಂದ ಈ ಲೀಗ್ ಗಳು ಯಾವಾಗ ಶುರುವಾಗುತ್ತದೆ ಎಂಬುದು ಗೊತ್ತಿಲ್ಲ ಎಂದು ಯುವಿ ತಿಳಿಸಿದ್ದಾರೆ.
ಇನ್ನು ಯುವ ಬ್ಯಾಟ್ಸ್ ಮೆನ್ ಶುಬ್ಮಾನ್ ಗಿಲ್ ಅವರ ಪ್ರತಿಭೆಯನ್ನು ಕೊಂಡಾಡಿದ ಯುವಿ, 20ರ ಹರೆಯದ ಗಿಲ್ ಗೆ ಉಜ್ಜಲವಾದ ಭವಿಷ್ಯವಿದೆ. ಆತ ಭಾರತ ತಂಡದಲ್ಲಿ ಸುದೀರ್ಘವಾಗಿ ಆಡುವ ಅವಕಾಶವಿದೆ. ಈ ನಡುವೆ ಮೈದಾನದಲ್ಲಿ ಗಿಲ್ ಅವರ ವರ್ತನೆಯ ಬಗ್ಗೆ ಟೀಕೆಗಳಿವೆ. ಆದ್ರೂ ಯುವರಾಜ್ ಸಿಂಗ್ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಗಿಲ್ ದೆಹಲಿ ವಿರುದ್ಧದ ರಣಜಿ ಪಂದ್ಯದ ವೇಳೆ ಅಂಪೈರ್ ಜೊತೆ ಮಾತಿನ ಸಮರ ನಡೆಸಿದ್ದರು ಎಂಬ ಆರೋಪವಿತ್ತು.
ಆ ಘಟನೆ ನಡೆದಾಗ ನಾನೂ ಮೈದಾನದಲ್ಲಿದ್ದೆ. ಗಿಲ್ ಯಾರನ್ನೂ ಕೂಡ ನಿಂದನೆ ಮಾಡಿಲ್ಲ. ಅಂಪೈರ್ ಅವರನ್ನು ಪ್ರಶ್ನೆ ಮಾಡಿದ್ದಾನೆ. ಕೆಲವೊಂದು ಬಾರಿ ಬ್ಯಾಟ್ಸ್ ಮೆನ್‍ಗಳು ಈ ರೀತಿ ಮಾಡುತ್ತಾರೆ. ಅವನು ಇನ್ನೂ ಚಿಕ್ಕವ. ರನ್ ಗಳಿಸುವ ಹಸಿವು ಇದೆ. ನಾನು ಕೂಡ ಕೆಲವೊಂದು ಬಾರಿ ಇದೇ ರೀತಿ ವರ್ತಿಸಿದ್ದೇನೆ. ಆತ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾನೆ. ಗಿಲ್ ವಿಶೇಷ ಪ್ರತಿಭೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಪಂಜಾಬ್ ನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಂತಹ ಸೌಲಭ್ಯಗಳನ್ನು ನೀಡಲು ಪಂಜಾಬ್ ಕ್ರಿಕೆಟ್ ಸಂಸ್ಥೆಯು ಯೋಜನೆ ರೂಪಿಸುತ್ತಿದೆ. ಅತ್ಯಾಧುನಿಕ ಮಟ್ಟದ ಸೌಲಭ್ಯಗಳನ್ನು ನೀಡಿದಾಗ ತಂಡದ ಗುಣಮಟ್ಟ ಕೂಡ ಸುಧಾರಣೆಯಾಗುತ್ತದೆ. ಹೀಗಾಗಿ ಮುಂದಿನ ಎರಡು ಮೂರು ವರ್ಷಗಳಲ್ಲಿ ಪಂಜಾಬ್ ತಂಡ ರಣಜಿ ಟ್ರೋಫಿ ಗೆಲ್ಲಬಹುದು ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.