ಕುಮಾರಸ್ವಾಮಿಯನ್ನ ಸಾಕಿದ್ದೇ ನಾನು : ಜಮೀರ್
ಸಿಂದಗಿ : ರಾಜ್ಯದಲ್ಲಿ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯ ಕಾವು ರಂಗೇರಿದೆ. ರಾಜಕೀಯ ನಾಯಕರು ಎಂದಿನಂತೆ ಪರಸ್ಪರ ವಾಗ್ಬಾಣಗಳನ್ನು ಬಿಡುತ್ತಿದ್ದಾರೆ. ಅದರಂತೆ ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ಖಾನ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬಸ್ ಒರೆಸುತ್ತಿದ್ದ ಹುಡುಗನನ್ನು ಕರೆತಂದು ಶಾಸಕ ಮಾಡಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿಂದಗಿಯಲ್ಲಿ ಜಮೀರ್ ತಿರುಗೇಟು ನೀಡಿದ್ದು, ಬಸ್ ಒರೆಸುವವನು ಅಲ್ಲ, ನಾನೊಬ್ಬ ಬಸ್ ಆಪರೇಟರ್ ಆಗಿದ್ದೆ. ಕುಮಾರಸ್ವಾಮಿ ಅವರಿಗೆ ಕುಳಿತು ಕೊಳ್ಳಲು ಜಾಗ ಇರಲಿಲ್ಲ. ಇದೇ ಟ್ರಾನ್ಪೋರ್ಟ್ ಆಪರೇಟರ್ ಆಗ ಅವನಿಗೆ ಜಾಗ ಕೊಟ್ಟಿದ್ದು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಾನು ಇಲ್ಲ ಅಂದಿದ್ರೆ, ಕುಮಾರಸ್ವಾಮಿನೂ ಇಲ್ಲಿ ಇರುತ್ತಿರಲಿಲ್ಲ ಎಂದ ಜಮೀರ್, ನಾನು ಅವನಿಗೋಸ್ಕರ ಬಸ್ ಓಡಿಸಿದ್ದೇನೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಎಂಎಲ್ ಎಗಳನ್ನು ರಾಜ್ಯಪಾಲರ ಬಳಿ ಕರೆದುಕೊಂಡು ಹೋದಾಗ ನಾನು ಬಸ್ಸು ಓಡಿಸಿದ್ದೆ. ಆದರೆ ಅದರ ಫಲವನ್ನು ಅವನು ಈಗಾಗಲೇ ನನಗೆ ಕೊಟ್ಟಿದ್ದಾನೆ ಎಂದು ಏಕವಚನದಲ್ಲೇ ಕಿಡಿಕಾರಿದರು.









