ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ.. ಓಡಿಹೋಗಿಲ್ಲ : ಭವಿತ್
ಬೆಂಗಳೂರು : ನಾನು ರಮೇಶ್ ಜಾರಕಿಹೊಳಿ ಸಿಡಿಯ ಸೂತ್ರಧಾರ ಕಿಂಗ್ ಪಿನ್ 2 ಎಂದು ಉಲ್ಲೇಖ ಮಾಡಲಾಗುತ್ತಿದೆ. ಇದು ಶುದ್ಧ ಸುಳ್ಳು, ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಸಿಡಿ ಪ್ರಕರಣದಲ್ಲಿ ಕಿಂಗ್ ಪಿನ್ 2 ಎಂದು ಆರೋಪ ಹೊಂದಿರುವ ಭವಿತ್ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ಸುದ್ದಿ ಪ್ರಸಾರ ಆಗುತ್ತಿರುವ ಬಗ್ಗೆ 2 ನಿಮಿಷಗಳ ವಿಡಿಯೋ ಮಾಡಿರುವ ಅವರು, ನಾನು ಸಿಡಿಯಾ ಸೂತ್ರಧಾರ ಕಿಂಗ್ ಪೀನ್ 2ಎಂದು ಉಲ್ಲೇಖ ಮಾಡಲಾಗ್ತಿದೆ. ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಅದು ಶುದ್ಧ ಸುಳ್ಳು, ಈ ಪ್ರಕರಣದಲ್ಲಿ ಯಾವುದೇ ರೀತಿಯ ನನ್ನ ಪಾತ್ರವಿಲ್ಲ. ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದೇನೆ. ಪೊಲೀಸರು ನನ್ನನ್ನು ವಿಚಾರಣೆಗೆ ಕರೆದಿದ್ದರು ನಾನು ಹಾಜರಾಗಿದ್ದೇನೆ. ಈಗ ಮಾಧ್ಯಮಗಳಲ್ಲಿ ನಾನು ತಲೆಮರೆಸಿಕೊಂಡಿದ್ದೇನೆ ಎಂದು ಹೇಳಲಾಗುತ್ತಿದೆ ಅದು ಶುದ್ಧ ಸುಳ್ಳು ಎಂದು ತಿಳಿಸಿದ್ದಾರೆ.

ಹಾಗೆ ಪೊಲೀಸ್ ತನಿಖೆಯಲ್ಲಿ ನಾನು ಅಪರಾಧಿ ಎಂದು ಖಚಿತವಾದರೆ ನನ್ನ ಮೇಲೆ ಸುದ್ದಿ ಪ್ರಸಾರ ಮಾಡಿ ಎಂದು ಹೇಳಿರುವ ಭವಿತ್, ಸತ್ಯಾಸತ್ಯತೆ ತಿಳಿಯದೆ ನನ್ನ ಮೇಲೆ ಅಪಪ್ರಚಾರ ತೇಜೋವಧೆ ಮಾಡಲಾಗುತ್ತಿದೆ ಅದು ತಪ್ಪು. ಪೊಲೀಸರ ವರದಿ ಬರೋವರೆಗು ತಾಳ್ಮೆಯಿಂದ ಇರಿ ಅಲ್ಲಿಯವರೆಗೂ ಈ ರೀತಿ ಪ್ರಚಾರ ಮಾಡುವುದು ತಪ್ಪು ಎಂದಿದ್ದಾರೆ.
ಇನ್ನ ನನ್ನದು ಕೂಡ ಒಂದು ಕುಟುಂಬವಿದೆ, ನನ್ನ ತಾಯಿ ಹಾರ್ಟ್ ಪೇಶೆಂಟ್ ಕೂಡ ಹೌದು. ಒಬ್ಬರ ಜೀವನ ಹಾಳು ಮಾಡುವುದು ಸರಿಯಲ್ಲ. ನಾನು ತಪ್ಪಿತಸ್ಥ ಆಗಿರ್ತಿದ್ರೆ ಓಡಿ ಹೋಗುತ್ತಿದ್ದೆ ಆದರೆ ನಾನು ತನಿಖೆಗೆ ಒಳಪಟ್ಟಿದ್ದೇನೆ. ನನ್ನ ಮೊಬೈಲ್ ಸೇರಿದಂತೆ ಎಲ್ಲಾ ರೀತಿಯ ದಾಖಲಾತಿ ಕೊಟ್ಟಿದ್ದೇನೆ. ನನ್ನ ವಿಚಾರಣೆ ಕರೆದಾಗ ನಾನು ಎಲ್ಲ ರೀತಿಯಲ್ಲೂ ಸಹಕರಿಸಿದ್ದೇನೆ. ಒಂದು ವೇಳೆ ನನ್ನ ಪಾತ್ರ ಸಾಬೀತಾದರೆ ಮಾಧ್ಯಮ ಸ್ವಾತಂತ್ರ್ಯವಾಗಿದೆ, ಏನು ಬೇಕಾದರೂ ಮಾಡಿಕೊಳ್ಳಿ. ಪೊಲೀಸರ ಡಿಟೇಲ್ಸ್ ಬಾರದೆ ತಾವು ನನ್ನನ್ನು ತಪ್ಪಿತಸ್ಥ ಅನ್ನೋದು ಎಷ್ಟರಮಟ್ಟಿಗೆ ಸರಿ ಎಂದು ಭವಿತ್ ಪ್ರಶ್ನೆ ಮಾಡಿದ್ದಾರೆ.








