ನವದೆಹಲಿ: ಕೊರೊ ಸೋಂಕಿನಿಂದ ಆರ್ಥಿಕ ಸಂಕಷ್ಟದಲ್ಲಿರುವ ದೇಶದ ಜನತೆಗೆ ಆರ್ಥಿಕ ಬೆಂಬಲ, ಸರ್ಕಾರಿ ಸಂಸ್ಥೆಗಳಿಗೆ ಬಲ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸೃಷ್ಟಿಸಬೇಕಾಗಿರುವ ಮೋದಿ ಸರ್ಕಾರವು ಎಲ್ಲವನ್ನು ನಾಶ ಮಾಡುತ್ತಿದೆ ಎಂದು ಕೈ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ LICಗೆ ಸೇರಿದ ಶೇ 25ರಷ್ಟು ಷೇರನ್ನು ಮಾರಾಟ ಮಾಡಲು ನಿರ್ಧರಿಸಿರುವ ಮಾಹಿತಿ ಸಿಕ್ಕ ಬೆನ್ನಲ್ಲೇ ಸರ್ಕಾರದ ನಡೆಯನ್ನು ರಾಹುಲ್ ಗಾಂಧಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಇನ್ನೂ ಸ್ವಯಂ ಅಪರಾಧದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ಮುಚ್ಚಿ ಹಾಕಲು ಸರ್ಕಾರದ ಆಸ್ತಿಯನ್ನು ಒಂದೊಂದಾಗಿ ಮಾರಾಟ ಮಾಡಲಾಗುತ್ತಿದೆ. ಇದು ನಾಚಿಕೆಗೇಡಿನ ಕ್ರಮ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಭಾರತದ ಎರಡನೇ ಅತಿದೊಡ್ಡ ರೀಟೈಲರ್, ಮೂರನೇ ಅತಿದೊಡ್ಡ ರಿಫೈನರಿ ಸಂಸ್ಥೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗೆ ಸೇರಿರುವ ಸುಮಾರು ಶೇ 52.98 ಪಾಲನ್ನು ಮಾರಲು ಹೊರಟಿರುವ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
” ಯುವ ಜನಾಂಗಕ್ಕೆ ಉದ್ಯೋಗ ಬೇಕಾಗಿದ್ದು, ಸರ್ಕಾರ ಉದ್ಯೋಗ ಸೃಷ್ಟಿ ಬದಲು ಉದ್ಯೋಗ ಅವಕಾಶವನ್ನು ನಾಶಪಡಿಸುತ್ತಿದೆ. ಅನಗತ್ಯ ಖಾಸಗೀಕರಣದ ಮೂಲಕ ದುರಂತಕ್ಕೆ ನಾಂದಿ ಹಾಡುತ್ತಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡಿ ಖಾಸಗಿಯವರ ಕೈಗೆ ನೀಡುತ್ತಿದೆ” ಎಂದು ರಾಹುಲ್ ಗಾಂಧಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.