ಕಾಂಗ್ರೆಸ್ ಮಾಡಿದ್ದ “ಹೆಬ್ಬೆಟ್ಟು ಗಿರಾಕಿ ಮೋದಿ” ಟ್ವೀಟ್ ಡಿಲೀಟ್..!
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ಮಾಡಿದ್ದ “ಹೆಬ್ಬೆಟ್ಟು ಗಿರಾಕಿ ಮೋದಿ” ಎಂಬ ಟ್ವೀಟ್ ಅನ್ನ ಇದೀಗ ಡಿಲೀಟ್ ಮಾಡಲಾಗಿದೆ. ಕಾಂಗ್ರೆಸ್ ನ ಟ್ವೀಟ್ ಗೆ ಬಿಜೆಪಿ ಹಾಗೂ ಮೋದಿ ಬೆಂಬಲಿಗರು ತೀವ್ರ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಟ್ವೀಟ್ ಡಿಲೀಟ್ ಮಾಡಲಾಗಿದೆ.
ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಕರ್ನಾಟಕ ಕಾಂಗ್ರೆಸ್, ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು. ಆದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಓದಲಿಲ್ಲ. ವಯಸ್ಕರಿಗೆ ಶಿಕ್ಷಣ ಯೋಜನೆಯನ್ನೂ ಮಾಡಿತ್ತು. ಆದರೂ ಓದಲಿಲ್ಲ. ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ ಎಂದು ಹೇಳಿತ್ತು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದ ರಾಜ್ಯ ಬಿಜೆಪಿ, ದೇಶದಲ್ಲಿ ಸಾಕಷ್ಟು ಶಾಲೆಗಳಿದ್ದವು. ಆದರೆ, 50 ವರ್ಷ ಮೇಲ್ಪಟ್ಟ ಅತಿ ಹಿರಿಯ ಯುವ ನಾಯಕ ಭಾರತದಲ್ಲಿ ಓದಲೇ ಇಲ್ಲ. ಭಾರತದಲ್ಲಿ ವಯಸ್ಕರ ಶಿಕ್ಷಣ ಯೋಜನೆಯಿದ್ದರೂ ಪಪ್ಪುವಿನ ಬುದ್ಧಿ ಬೆಳೆಯಲೇ ಇಲ್ಲ ಎಂದು ಹೇಳಿತ್ತು.
ಅಷ್ಟೇ ಅಲ್ಲ ಇದೇ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೂಡ ತಿರುಗೇಟು ನೀಡಿದ್ದು, ಇಡೀ ವಿಶ್ವವೇ ಮೋದಿ ಅವರ ನಾಯಕತ್ವ ಒಪ್ಪಿದೆ. ಅಂತಹ ಮೋದಿ ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವ ಕಾಂಗ್ರೆಸ್ ಪಕ್ಷದ ಯೋಗ್ಯತೆ ಗೊತ್ತಾಗಿದೆ. ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ತಿದೆ. ಈ ಕೂಡಲೇ ಕಾಂಗ್ರೆಸ್ ದೇಶದ ಜನರ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು.