ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಯಾವುದೇ ಸಡಿಲಿಕೆ ಇರಬಾರದು: ಮೋದಿ
ಜಿಲ್ಲೆಯ 50% ಜನರಿಗೆ ಒಂದೂ ಕೋವಿಡ್ ಲಸಿಕೆ ನೀಡದಿರುವ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಮುಖ್ಯ ಮಂತ್ರಿಗಳು ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.
ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಯಾವುದೇ ಸಡಿಲಿಕೆ ಇರಬಾರದು ಎಂದು ತಾಕೀತು ಮಾಡಿದರು. ಆರೋಗ್ಯ ಕಾರ್ಯಕರ್ತರು ಮಾಡಿದ ಕಠಿಣ ಕೆಲಸವನ್ನು ಪ್ರಧಾನಿ ಶ್ಲಾಘಿಸಿದರು, ಆದರೆ ಇದು ವಿಶ್ರಾಂತಿ ಪಡೆಯುವ ಸಮಯವಲ್ಲ ಎಂದು ಹೇಳಿದರು.
“ಇದುವರೆಗಿನ ಪ್ರಗತಿಯು ನಿಮ್ಮ ಕಠಿಣ ಪರಿಶ್ರಮದಿಂದ ಬಂದಿದೆ. ಅಧಿಕಾರಿಗಳು, ಆಶಾ ಕಾರ್ಯಕರ್ತರು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಿದರು. ಮೈಲಿಗಟ್ಟಲೆ ನಡೆದು ದೂರದ ಸ್ಥಳಗಳಿಗೆ ಲಸಿಕೆಯನ್ನು ತಲುಪಿಸಿದ್ದಾರೆ. ಆದರೆ ನೂರು ಕೋಟಿ (ಡೋಸ್) ನಂತರ ನಾವು ಸಡಿಲಗೊಂಡರೆ ಹೊಸ ಬಿಕ್ಕಟ್ಟು ಬರಬಹುದು”
“ರೋಗ ಮತ್ತು ಶತ್ರುಗಳನ್ನು ಎಂದಿಗೂ ಕಡಿಮೆ ಅಂದಾಜು ಮಾಡಬಾರದು. ಅವರ ವಿರುದ್ಧ ಕೊನೆಯವರೆಗೂ ಹೋರಾಡಬೇಕು. ಹಾಗಾಗಿ, ನಾವು ಸ್ವಲ್ಪವೂ ಸಡಿಲಗೊಳಿಸಬಾರದು ಎಂದು ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.