ಪಣಜಿ: ಮುಂದಿನ ಬಜೆಟ್ ನಲ್ಲಿ ಮೂಲಸೌಕರ್ಯಕ್ಕಾಗಿ 11 ಲಕ್ಷ ಕೋಟಿ ರೂ. ಯೋಜಿತ ಹೂಡಿಕೆಯ ದೊಡ್ಡ ಪಾಲನ್ನು ಇಂಧನ ಕ್ಷೇತ್ರಕ್ಕೆ ಖರ್ಚು ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಈ ಮೂಲಕ ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದ್ದಾರೆ. ಪ್ರಾಥಮಿಕ ಇಂಧನ ಬೇಡಿಕೆ 2045 ರ ವೇಳೆಗೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನಾವು ಸಿದ್ಧತೆಗಳನ್ನು ನಡೆಸಿದ್ದೇವೆ ಎಂದು ಹೇಳಿದ್ದಾರೆ. ಮುಂಬರುವ ಐದಾರು ವರ್ಷಗಳಲ್ಲಿ ಇಂಧನ ವಲಯದಲ್ಲಿ ಭಾರತವು 67 ಶತಕೋಟಿ ಡಾಲರ್ ಅಥವಾ ಸುಮಾರು 5.5 ಲಕ್ಷ ಕೋಟಿ ರೂ. ಹೂಡಿಕೆ ನೋಡಲಿದೆ. 2030 ರ ವೇಳೆಗೆ ದೇಶವು ತನ್ನ ಸಂಸ್ಕರಣಾ ಸಾಮರ್ಥ್ಯವನ್ನು 254 MMTPA (ವರ್ಷಕ್ಕೆ ಮಿಲಿಯನ್ ಮೆಟ್ರಿಕ್ ಟನ್) ನಿಂದ 450 MMTPA ಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಮೂಲಸೌಕರ್ಯಕ್ಕಾಗಿ ಮೀಸಲಿಟ್ಟ 11 ಲಕ್ಷ ಕೋಟಿ ರೂ.ನಲ್ಲಿ ಹೆಚ್ಚಿನ ಭಾಗವು ಇಂಧನ ಕ್ಷೇತ್ರಕ್ಕೆ ಹೋಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರರತದ ಬೆಳವಣಿಗೆ ವೇಗ ಜಾಗತಿಕ ಅಂದಾಜಿಗಿಂತ ಹೆಚ್ಚಾಗಿದೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಭಾರತವು ಶೀಘ್ರದಲ್ಲಿಯೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎಂದು ಆರ್ಥಿಕ ತಜ್ಞರು ನಂಬಿದ್ದಾರೆ ಎಂದು ಹೇಳಿದರು.