ಹೊಸದಿಲ್ಲಿ: ಸಂಯುಕ್ತ ಕಿಸಾನ್ ಮೋರ್ಚಾ ತನ್ನ ನವೆಂಬರ್ 29 ರಂದು ಸಂಸತ್ತಿಗೆ ನಡೆಸುತ್ತಿದ್ದ ಟ್ರ್ಯಾಕ್ಟರ್ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದು, ಮುಂದಿನ ತಿಂಗಳು ಸಭೆ ನಡೆಸಿ ಮುಂದಿನ ಕ್ರಮವನ್ನು ನಿರ್ಧರಿಸಲಿದೆ ಎಂದು ರೈತ ಮುಖಂಡರು ಶನಿವಾರ ತಿಳಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಎರಡು ದಿನಗಳ ಮುಂಚಿತವಾಗಿ ಮೆರವಣಿಗೆಯನ್ನು ಅಮಾನತುಗೊಳಿಸುವ ನಿರ್ಧಾರವನ್ನ ರೈತ ಸಂಘ ತೆಗೆದುಕೊಂಡಿದೆ. ಕಳೆದ ವರ್ಷದಿಂದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಗಳ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ (SKM), ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಖಾತರಿಪಡಿಸುವ ಶಾಸನಕ್ಕಾಗಿ ಸಂಸತ್ತಿನಲ್ಲಿ ಭರವಸೆ ನೀಡಬೇಕೆಂದು ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಕೆಎಂ ಮುಖಂಡ ದರ್ಶನ್ ಪಾಲ್, ‘ಸೋಮವಾರ ಸಂಸತ್ ಪಾದಯಾತ್ರೆಯನ್ನು ಸ್ಥಗಿತಗೊಳಿಸುತ್ತಿದ್ದೇವೆ. ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು, ಪ್ರಾಣ ಕಳೆದುಕೊಂಡ ರೈತರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವಂತೆ ಪ್ರಧಾನಿಗೆ ಪತ್ರ ಬರೆದಿದ್ದೇವೆ. (ಪ್ರತಿಭಟನೆಯ ಸಮಯದಲ್ಲಿ), ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಕೇಂದ್ರ ಸಚಿವ ಸಂಪುಟದಿಂದ ಅಜಯ್ ಮಿಶ್ರಾ ಟೆನಿ ಅವರನ್ನು ಅಮಾನತುಗೊಳಿಸುವುದು ಸೇರಿದಂತೆ ಇತರ ಸಮಸ್ಯೆಗಳನ್ನ ಕೇಂದ್ರ ಸರ್ಕಾರದ ಮುಂದಿಟ್ಟಿದ್ದೇವೆ ಎಂದು ತಿಳಿಸಿದ್ದರು.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಸರ್ಕಾರದ ಕ್ರಮವನ್ನು ರೈತ ಸಂಘಗಳು ಸ್ವಾಗತಿಸಿದ್ದರೂ, ಕಾನೂನುಗಳನ್ನು ಸಂಪೂರ್ಣವಾಗಿ ಮತ್ತು ಔಪಚಾರಿಕವಾಗಿ ಹಿಂತೆಗೆದುಕೊಳ್ಳುವವರೆಗೆ ಮತ್ತು ಎಂಎಸ್‌ಪಿಯ ಕಾನೂನು ಖಾತರಿ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವವರೆಗೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಅವರು ಹೇಳಿದರು. ಪ್ರತಿಭಟನೆಯ ಸಂದರ್ಭದಲ್ಲಿ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳು ಮತ್ತು ರೈಲ್ವೆಗೆ ನಿರ್ದೇಶನ ನೀಡಬೇಕು ಎಂದು ಪಾಲ್ ಹೇಳಿದ್ದಾರೆ.








