ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಈಗಾಗಲೇ ಭಾನುವಾರ ಲಾಕ್ ಡೌನ್ ಘೋಷಿಸಿರುವ ರಾಜ್ಯ ಸರ್ಕಾರ ಮತ್ತೆ 12 ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೆ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಕ್ಯಾಬಿನೆಟ್ ಹಾಲ್ ನಲ್ಲಿ ಸಚಿವರು ಟಾಸ್ಟ್ ಫೋರ್ಸ್ ತಜ್ಞರ ಜೊತೆಗಿನ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಕೊರೊನಾ ತಡೆಗಾಗಿ ಲಾಕ್ ಡೌನ್ ಮಾಡುವ ಕುರಿತ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಒಂದು ವೇಳೆ ಮುಖ್ಯಮಂತ್ರಿಗಳು ಒಪ್ಪಿದ್ರೆ ಜುಲೈ 6 ರಿಂದ 12 ದಿನ ಲಾಕ್ ಡೌನ್ ಮಾಡುವ ಕುರಿತ ಚಿಂತನೆ ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಇನ್ನು ಈ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಪರೀಕ್ಷೆಗಳ ಪ್ರಮಾಣ ಹೆಚ್ಚಳವಾಗಬೇಕು. ಸೋಂಕು ಕಾಣಿಸಿಕೊಂಡ ಕೂಡಲೇ ರೋಗಿಗಳನ್ನು ನಿಗದಿತ ಸ್ಥಳಕ್ಕೆ ಶಿಫ್ಟ್ ಮಾಡುವ ಕೆಲಸ ಆಗಬೇಕೆಂದು ಟಾಸ್ಕ್ ಫೋರ್ಸ್ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರಂತೆ.
ಲಾಕ್ ಡೌನ್ ವಿಚಾರವಾಗಿ ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಎಲ್ಲದಕ್ಕೂ 7ನೇ ತಾರೀಕು ಕಾಯಬೇಕಿದೆ. ಎಲ್ಲವನ್ನು ಮುಖ್ಯಮಂತ್ರಿಗಳು ತಿಳಿಸಲಿದ್ದಾರೆ ಎಂದು ಹೇಳಿದ್ದಾರೆ