ನವದೆಹಲಿ : ದೇಶದಲ್ಲಿ ಭಾರಿ ಆತಂಕವನ್ನು ಸೃಷ್ಟಿಮಾಡಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ತುರ್ತು 15 ಸಾವಿರ ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ಮಂಜೂರಾಗಿರುವ ಹಣವನ್ನು ಮೂರು ಹಂತಗಳಲ್ಲಿ ಬಿಡುಗಡೆಗೊಳಿಸಲಾಗುವುದು ಮತ್ತು ತ್ವರಿತ ಕೋವಿಡ್ -19 ತುರ್ತು ಪ್ರತಿಕ್ರಿಯೆಗಾಗಿ, 7774 ಕೋಟಿ ರೂ. ವಿನಿಯೋಗಿಸಲಾಗುವುದು. ಉಳಿದ ಮೊತ್ತವನ್ನು ಒಂದರಿಂದ ನಾಲ್ಕು ವರ್ಷಗಳ ಅವಧಿಯ ಮಧ್ಯಮ ಅವಧಿಯ ಬೆಂಬಲಕ್ಕಾಗಿ ಮೀಸಲಿರಿಸಲಾಗುವುದಾಗಿ ತಿಳಿಸಿದ್ದಾರೆ. ಇದಲ್ಲದೆ ಪ್ರಯೋಗಾಲಯಗಳ ಸ್ಥಾಪನೆ ಮತ್ತು ಕಣ್ಗಾವಲು ಚಟುವಟಿಕೆಗಳನ್ನು ಉತ್ತೇಜಿಸುವುದು, ಜೈವಿಕ ಭದ್ರತಾ ಸಿದ್ಧತೆ, ಸಾಂಕ್ರಾಮಿಕ ಸಂಶೋಧನೆ ಮತ್ತು ಸಮುದಾಯಗಳನ್ನು ಪೂರ್ವಭಾವಿಯಾಗಿ ತೊಡಗಿಸಿಕೊಳ್ಳಲು ಮತ್ತು ಅಪಾಯ ಸಂವಹನ ಚಟುವಟಿಕೆಗಳನ್ನು ನಡೆಸಲು ಈ ಪ್ಯಾಕೇಜ್ ಸಹಾಯಕವಾಗಲಿದೆ ಎಂದರು.
ಇನ್ನು ಮೊದಲ ಹಂತದಲ್ಲಿ ಇತರೆ ಸಚಿವಾಲಯಗಳ ನೆರವಿನೊಂದಿಗೆ ಆರೋಗ್ಯ ಸಚಿವಾಲಯ ಈಗಾಗಲೇ ಹಲವು ಚಟುವಟಿಕೆಗಳನ್ನು ಆರಂಭಿಸಿದೆ ಎಂದು ಮಾಹಿತಿ ನೀಡಿದ ಸಚಿವರು, ಈ ಪ್ಯಾಕೇಜ್ ಅಡಿಯಲ್ಲಿ ಹೆಚ್ಚುವರಿಯಾಗಿ 3 ಸಾವಿರ ಕೋಟಿಯನ್ನು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ಸದ್ಯ ಅಸ್ತಿತ್ವದಲ್ಲಿರುವ ವೈದ್ಯಕೀಯ ವ್ಯವಸ್ಥೆ ಬಲಪಡಿಸಲು , ಕೋವಿಡ್ ಆಸ್ಪತ್ರೆಗಳು,ಕೋವಿಡ್ ಚಿಕಿತ್ಸಾ ಕೇಂದ್ರಗಳ ಅಭಿವೃದ್ಧಿಗಾಗಿ ಈ ಮೊತ್ತ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.








