ಪೋಷಕರ ಎದುರೇ 16 ವರ್ಷದ ಬಾಲಕಿ ಮೇಲೆ 8 ಮಂದಿ ಕಾಮುಕರಿಂದ ಸಾಮೂಹಿಕ ಅತ್ಯಾಚಾರ
ಉತ್ತರಪ್ರದೇಶ : ‘ಯೋಗಿ ರಾಜ್ಯ’ ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆಯತ್ತ ಇಡೀ ದೇಶದ ಜನ ಬೊಟ್ಟು ಮಾಡಿ ತೋರಿಸುವಂತಹ ಸ್ಥಿತಿ ಬಂದಿದೆ.. ಅಪರಾಧಗಳ ಆಗರವಾಗಿರುವ ಉತ್ತರಪ್ರದೇಶದಲ್ಲಿ ದಿನೇ ದಿನೇ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ್ತಲೇ ಇದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎನ್ನಿಸುವಷ್ಟರ ಮಟ್ಟಿಗೆ ಅಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದೆ.
ಸದ್ಯಕ್ಕೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಉತ್ತರಪ್ರದೇಶವೇಮಹಿಳೆಯರು , ಹೆಣ್ಮಕ್ಕಳಿಗೆ ಅತ್ಯಂತ ಅಪಾಯಕಾರಿ ಎಂಬ ನಿಲುವಿಗೆ ಬರುವಂತಾಗಿದೆ ಅಲ್ಲಿನ ಪರಿಸ್ಥಿತಿ. ಇದೀಗ ಇದಕ್ಕೆ ಪುಷ್ಠಿ ನೀಡುವಂತ ಮತ್ತೊಂದು ಅಮಾನವೀಯ ಘಟನೆ ನಡೆದುಹೋಗಿದೆ.. 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಪೋಷಕರ ಎದುರಲ್ಲೇ 8 ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಉತ್ತರ ಪ್ರದೇಶದ ಆಮ್ರೋಹ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ತಮ್ಮ ಕುಟುಂಬದ ಮಹಿಳೆಯೊಂದಿಗೆ ಬಾಲಕಿಯ ಅಣ್ಣ ಓಡಿ ಹೋಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಕಾಮುಕರು 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಜೋಡಿಯನ್ನು ಹುಡುಕಲು ಬಾಲಕಿ ಹಾಗೂ ಪೊಷಕರನ್ನು ಆರೋಪಿಗಳು ತಮ್ಮ ಮನೆಗೆ ಕರೆಸಿದ್ದಾರೆ. ಬಳಿಕ ಬಾಲಕಿಯನ್ನು ಥಳಿಸಿದ್ದಾರೆ. ಅಲ್ಲದೆ ಕಾಣೆಯಾದ ಮಹಿಳೆಯ ತಂದೆ, ಚಿಕ್ಕಪ್ಪಂದಿರು, ಸಹೋದರರು ಸೇರಿ 8 ಜನ ಪೋಷಕರ ಎದುರೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಆರೋಪಿಗಳಲ್ಲಿ ಒಬ್ಬ ಒಪ್ಪಿಗೆ ಇಲ್ಲದೇ ಆಕೆಯನ್ನು ವಿವಾಹವಾಗಿದ್ದಾನೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಜೂನ್ 29ರಂದು ನಮ್ಮನ್ನು ಮನೆಯಿಂದ ಹೊರ ಹಾಕಿದ್ದಾರೆ. ಅಲ್ಲದೆ ಈ ಕುರಿತು ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿಯ ಪೋಷಕರು ತಿಳಿಸಿದ್ದಾರೆ.
ಪೊಲೀಸರಿಗೆ ಈ ಕುರಿತು ತಿಳಿಸಿ, ದೂರು ನೀಡಲು ತೆರಳಿದ್ದು, ದೂರು ಸ್ವೀಕರಿಸಿಲ್ಲ. ಬಾಲಕಿ ಚಿತ್ರಹಿಂಸೆ ಕುರಿತು ವಿವರಿಸಿದಾಗ ಎಫ್ಐಆರ್ ದಾಖಲಿಸಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ. ಈ ಸಂಬಂಧ ಐಪಿಸಿ ಸೆಕ್ಷನ್ಗಳ ಅಡಿ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವರದಿಯ ಪ್ರಕಾರ ಈ ಮೊದಲು ಎರಡೂ ಕುಟುಂಬದವರು ಚೆನ್ನಾಗಿದ್ದರು. ಆದರೆ ಜೂನ್ 27ರಂದು ಪ್ರೀಮಿಗಳು ಓಡಿ ಹೋದ ಬಳಿಕ ಪ್ರತಿಕಾರ ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಪ್ರಭಾವಿಗಳಾಗಿದ್ದು, ನಮ್ಮ ಕುಟುಂಬದ ಇತರೆ ಮಹಿಳೆಯರಿಗೂ ಇದೇ ರೀತಿ ಮಾಡಬಹುದು. ಹೀಗಾಗಿ ತುಂಬಾ ಹೆದರಿಕೆಯಾಗುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಾಲಕಿಯ ಚಿಕ್ಕಮ್ಮ ಆಗ್ರಹಿಸಿದ್ದಾರೆ.