ಚೀನಾದಲ್ಲಿ ಸಿಲುಕಿರುವ 233 ಭಾರತೀಯರು ವಂದೇ ಭಾರತ್ ಮಿಷನ್’ನಡಿಯಲ್ಲಿ ಭಾರತಕ್ಕೆ ವಾಪಸ್
ಬೀಜಿಂಗ್, ಅಗಸ್ಟ್ 7: ಲಾಕ್ ಡೌನ್ ಘೋಷಣೆಯಾಗುವ ಮೊದಲು ಚೀನಾಕ್ಕೆ ತೆರಳಿ ಅಲ್ಲೇ ಸಿಲುಕಿಕೊಂಡಿರುವ 233 ಭಾರತೀಯರನ್ನು ವಂದೇ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಭಾರತಕ್ಕೆ ವಾಪಸ್ ಕರೆತರುವ ಪ್ರಕ್ರಿಯೆ ಪ್ರಾರಂಭವಾಗಿದೆ. 233 ಭಾರತೀಯ ಪ್ರಜೆಗಳು ವಂದೇಭಾರತ್‌ಮಿಷನ್ ವಿಶೇಷ ವಿಮಾನದಲ್ಲಿ ಗುರುವಾರ ಮಧ್ಯಾಹ್ನ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಗುವಾಂಗ್ ನಲ್ಲಿರುವ ಭಾರತೀಯ ದೂತಾವಾಸ ಟ್ವೀಟ್ ಮಾಡಿದೆ.
ಚೀನಾಕ್ಕೆ ಪ್ರವಾಸ ತೆರಳಿದವರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿ ಕೊಂಡಿದ್ದು, ದಿಢೀರ್ ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಅವರಿಗೆ ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ. ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲಾ ವಿಮಾನ ಸೇವೆಗಳನ್ನು ರದ್ದುಮಾಡಲಾಗಿದ್ದು, ಬಳಿಕ ಲಾಕ್ ಡೌನ್ ತೆರವು ಗೊಳಿಸಿದರೂ, ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಭಾರತ ಸರ್ಕಾರ ವಂದೇ ಭಾರತ್ ಮಿಷನ್ ಯೋಜನೆಯಡಿಯಲ್ಲಿ ವಿವಿಧ ದೇಶಗಳಲ್ಲಿ ಸಿಲುಕಿರುವವರನ್ನು ಭಾರತಕ್ಕೆ ಕರೆ ತರುತ್ತಿದೆ.

ಇದೀಗ ಚೀನಾದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಗುವಾಂಗ್ಝು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 233 ಭಾರತೀಯರು ವಾಪಸ್ ಆಗಲಿದ್ದಾರೆ. ಈ ಕುರಿತು ಚೀನಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದ್ದು, ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚೀನಾದಿಂದ ಅವರೆಲ್ಲರೂ ಆಗಮಿಸುವುದಾಗಿ ಮಾಹಿತಿ ನೀಡಿದೆ. ಈಗಾಗಲೇ ವಿವಿಧ ದೇಶಗಳ 9 ಲಕ್ಷದ 39 ಸಾವಿರ ಮಂದಿ ವಂದೇ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ.








