5 ಸುಲಭ ರುಚಿಕರ ಪಾಯಸ, ಹಲ್ವಾ , ಕೇಸರಿಬಾತ್ ರೆಸಿಪಿಗಳು ನಿಮಗಾಗಿ..!
1. ಕ್ಯಾರೆಟ್ ಹಲ್ವಾ
ಬೇಕಾಗುವ ಸಾಮಗ್ರಿಗಳು
ಕ್ಯಾರೆಟ್ ತುರಿ – 3 ಕಪ್
ತುಪ್ಪ – 1/4 ಕಪ್
ಸಕ್ಕರೆ -1 ಕಪ್
ಹಾಲು – 3 ಕಪ್
ಡ್ರೈ ಫ್ರೂಟ್ಸ್ – ಸ್ವಲ್ಪ
ಏಲಕ್ಕಿ ಪುಡಿ – ಚಿಟಿಕೆಯಷ್ಟು
ಮಾಡುವ ವಿಧಾನ
ಮೊದಲಿಗೆ ಬಾಣಲೆಯನ್ನು ಬಿಸಿ ಮಾಡಿ, ತುಪ್ಪವನ್ನು ಹಾಕಿ ಕರಗಿಸಿ. ನಂತರ ಡ್ರೈ ಫ್ರೂಟ್ಸ್ ಗಳನ್ನು ಹುರಿದು ಪಕ್ಕದಲ್ಲಿ ಇಟ್ಟುಕೊಳ್ಳಿ. ನಂತರ ಅದೇ ಬಾಣಲೆಗೆ ಕ್ಯಾರೆಟ್ ತುರಿ ಸೇರಿಸಿ ಕೆಲವು ನಿಮಿಷ ಹುರಿಯಿರಿ. ಬಳಿಕ ಇದಕ್ಕೆ ಹಾಲನ್ನು ಸೇರಿಸಿ ಬೇಯಿಸಿಕೊಳ್ಳಿ.
ಹಾಲು ಇಂಗುವವರೆಗೆ ಕ್ಯಾರೆಟ್ ತುರಿಯನ್ನು ಬೇಯಿಸಿ ಕೊಳ್ಳಿ. ನಂತರ ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಸಕ್ಕರೆ ಕರಗಿದ ಬಳಿಕ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣ ತಳ ಬಿಡುವವರೆಗೂ ಕೈಯಾಡಿಸುತ್ತಾ ಇರಿ. ನಂತರ ಏಲಕ್ಕಿ ಪುಡಿ ಮತ್ತು ಹುರಿದಿಟ್ಟುಕೊಂಡ ಡ್ರೈಫ್ರೂಟ್ಸ್ ಸೇರಿಸಿ. ಈಗ ರುಚಿಯಾದ ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧ.
2. ಅನಾನಸ್ ಕೇಸರಿ ಬಾತ್
ಬೇಕಾಗುವ ಸಾಮಗ್ರಿಗಳು
ರವೆ – 1 ಕಪ್
ಚಿಕ್ಕದಾಗಿ ಹೆಚ್ಚಿದ ಅನಾನಸ್ – 1ಕಪ್
ತುಪ್ಪ – 1ಕಪ್
ಗೋಡಂಬಿ, ದ್ರಾಕ್ಷಿ ಸ್ವಲ್ಪ
ಏಲಕ್ಕಿ – 1
ಕೇಸರಿ ಬಣ್ಣ ಚಿಟಿಕೆಯಷ್ಟು
ಲವಂಗ – 2
ಮಾಡುವ ವಿಧಾನ
ಮೊದಲಿಗೆ ಬಾಣಲೆ ಬಿಸಿ ಮಾಡಿ 1 ಚಮಚ ತುಪ್ಪವನ್ನು ಕಾಯಿಸಿ. ನಂತರ ದ್ರಾಕ್ಷಿ ಗೋಡಂಬಿ, ಲವಂಗ ಹುರಿದು ಪಕ್ಕದಲ್ಲಿ ಇಟ್ಟುಕೊಳ್ಳಿ.
ನಂತರ ಅದೇ ಬಾಣಲೆಗೆ ಉಳಿದ ತುಪ್ಪ ಸೇರಿಸಿ ಬಿಸಿ ಮಾಡಿ. ನಂತರ ರವೆಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿಯಿರಿ. ಅದಕ್ಕೆ ಚಿಕ್ಕದಾಗಿ ಹೆಚ್ಚಿದ ಅನಾನಸ್ ಹೋಳುಗಳನ್ನು ಸೇರಿಸಿ ಐದು ನಿಮಿಷ ಕೈಯಾಡಿಸಿ. ನಂತರ ಸ್ವಲ್ಪ ಸ್ವಲ್ಪವೇ ಬಿಸಿನೀರನ್ನು ಸೇರಿಸಿ. ರವೆ ಬೆಂದ ಬಳಿಕ ಏಲಕ್ಕಿಪುಡಿ, ಕೇಸರಿ ಬಣ್ಣ, ಸಕ್ಕರೆ ಸೇರಿಸಿ 3 ನಿಮಿಷ ಹುರಿದು ಕೆಳಗಿಳಿಸಿ. ಈಗ ಮೊದಲೇ ಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ ಹಾಕಿ ಅಲಂಕರಿಸಿ.ರುಚಿಯಾದ ಅನಾನಸ್ ಕೇಸರಿ ಬಾತ್ ಸವಿಯಲು ಸಿದ್ಧವಾಗಿದೆ.
3. ಗೋಧಿ ಹಲ್ವಾ
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು – 1 ಕಪ್
ತುಪ್ಪ – 1 ಕಪ್
ಸಕ್ಕರೆ – 1 ಕಪ್
ಹಾಲು – 1 ಕಪ್
ನೀರು – ಅಗತ್ಯವಿರುವಷ್ಟು
ಏಲಕ್ಕಿ- 1
ದ್ರಾಕ್ಷಿ, ಗೋಡಂಬಿ – ಸ್ವಲ್ಪ
ಮಾಡುವ ವಿಧಾನ:
ಮೊದಲು ಬಾಣಲೆ ಬಿಸಿ ಮಾಡಿ ತುಪ್ಪ ಹಾಕಿ ಕಾಯಿಸಿ. ನಂತರ ಅದಕ್ಕೆ ಗೋಧಿ ಹಿಟ್ಟನ್ನು ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.
ಗೋಧಿ ಹಿಟ್ಟು ಕಂದು ಬಣ್ಣಕ್ಕೆ ತಿರುಗಿದಾಗ ಸಕ್ಕರೆ ಹಾಕಿ. ನಂತರ ಸ್ವಲ್ಪ ಸ್ವಲ್ಪವೇ ಹಾಲನ್ನು ನಿಧಾನಕ್ಕೆ ಮಿಶ್ರ ಮಾಡುತ್ತಾ ಹಾಕಿ. ನಂತರ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ , ಚೆನ್ನಾಗಿ ಬೆರೆಸಿ.
ಬಾಣಲೆಯಲ್ಲಿ ಗೋಧಿ ಮಿಶ್ರಣ ತಳ ಬಿಟ್ಟಾಗ ಅದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಮತ್ತು ಏಲಕ್ಕಿ ಸೇರಿಸಿ ತುಪ್ಪ ಸವರಿದ ಪ್ಲೇಟ್ ಗೆ ಹಾಕಿ. ಈಗ ರುಚಿಯಾದ ಗೋಧಿ ಹಲ್ವಾ ಸವಿಯಲು ಸಿದ್ಧ.
4. ಸಬ್ಬಕ್ಕಿ ಖೀರ್
ಬೇಕಾಗುವ ಸಾಮಗ್ರಿಗಳು
ಸಬ್ಬಕ್ಕಿ – 1 ಕಪ್
ಹಾಲು – 1 ಲೀಟರ್
ಸಕ್ಕರೆ – 1 ಕಪ್
ಒಣದ್ರಾಕ್ಷಿ, ಗೋಡಂಬಿ – ಸ್ವಲ್ಪ
ನೀರು – 1ಕಪ್
ಮಾಡುವ ವಿಧಾನ :
ಸಬ್ಬಕ್ಕಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ನೀರನ್ನು ಸೋಸಿ ತೆಗೆಯಿರಿ. ಸಬ್ಬಕ್ಕಿಯನ್ನು ಒಂದು ಬೌಲ್ ಗೆ ಹಾಕಿ ಹಾಲನ್ನು ಸೇರಿಸಿ. ನಂತರ ಇದನ್ನು ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಕಿ, ಸುಮಾರು 20 ನಿಮಿಷ ಕಾಲ ಸಣ್ಣ ಉರಿಯಲ್ಲಿ ಕುದಿಸಿ.
ನಂತರ ಒಂದು ಬೌಲ್ ಗೆ ಸಕ್ಕರೆ ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಸಕ್ಕರೆ ನೀರಿನಲ್ಲಿ ಚೆನ್ನಾಗಿ ಕರಗಿದ ನಂತರ ಕುದಿಯುತ್ತಿರುವ ಹಾಲಿನ ಮಿಶ್ರಣಕ್ಕೆ ಈ ಸಕ್ಕರೆ ನೀರನ್ನು ಬೆರೆಸಿ. ಈ ಮಿಶ್ರಣ ಖೀರ್ ಪ್ರಮಾಣಕ್ಕೆ ಗಟ್ಟಿಯಾಗುವವರೆಗೆ ಕುದಿಸಿ.
ನಂತರ ಇದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ ರುಚಿಯಾದ ಸಬ್ಬಕ್ಕಿ ಖೀರ್ ಸವಿಯಿರಿ.
5. ಸಿಹಿ ಕುಂಬಳಕಾಯಿ ಹಲ್ವಾ
ಬೇಕಾಗುವ ಸಾಮಗ್ರಿಗಳು
ಸಿಹಿ ಕುಂಬಳಕಾಯಿ ತುರಿ – 3 ಕಪ್
ತುಪ್ಪ – 2 ಚಮಚ
ಬಾದಾಮಿ ಗೋಡಂಬಿ ಚೂರುಗಳು – ಸ್ವಲ್ಪ
ಹಾಲು – 1 ಕಪ್
ಬೆಲ್ಲದ ಪುಡಿ – 1ಕಪ್
ಏಲಕ್ಕಿ ಪುಡಿ – ಚಿಟಿಕೆಯಷ್ಟು
ಮಾಡುವ ವಿಧಾನ
ಮೊದಲಿಗೆ ದಪ್ಪ ತಳದ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಬಾದಾಮಿ ಮತ್ತು ಗೋಡಂಬಿ ಚೂರುಗಳನ್ನು ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. ನಂತರ ಸಿಹಿ ಕುಂಬಳಕಾಯಿ ತುರಿಯನ್ನು ಸೇರಿಸಿ ಅದರ ಹಸಿವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಬಳಿಕ ಅದಕ್ಕೆ ಹಾಲು ಸೇರಿಸಿ ಮಿಶ್ರ ಮಾಡಿ. ನಂತರ ಕೈಯಾಡಿಸುತ್ತಾ ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಬೆಲ್ಲದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಸಿಹಿ ಕುಂಬಳಕಾಯಿ ಮಿಶ್ರಣ ತಳ ಬಿಡುವವರಗೆ ಚೆನ್ನಾಗಿ ಬೆರೆಸಿ. ನಂತರ ಏಲಕ್ಕಿ ಪುಡಿ ಸೇರಿಸಿ. ಈಗ ಹುರಿದಿಟ್ಟುಕೊಂಡ ಗೋಡಂಬಿ, ಬಾದಾಮಿ ಸೇರಿಸಿ. ರುಚಿಯಾದ ಸಿಹಿ ಕುಂಬಳಕಾಯಿ ಹಲ್ವಾ ಸವಿಯಲು ಸಿದ್ಧವಾಗಿದೆ.