ಕಂದಾಯ ಇಲಾಖೆಯ ಅಧಿಕಾರಿಯೊಬ್ಬ ಲಂಚ (Bribe) ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಲಂಚ ಪಡೆಯುತ್ತಿದ್ದಾಗ 5 ಸಾವಿರ ರೂ. ಹಣವನ್ನು ನುಂಗಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.
ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಿಯೋಜಿಸಲಾಗಿದ್ದ ಕಂದಾಯ ಇಲಾಖೆಯ ಅಧಿಕಾರಿ ಗಜೇಂದ್ರ ಸಿಂಗ್ ಎಂಬ ವ್ಯಕ್ತಿಯೇ ಈ ಅವಾಂತರ ಮಾಡಿದ ಅಧಿಕಾರಿ. ಭೂ ಪ್ರಕರಣದ ದೂರುದಾರರಾದ ಚಂದನ್ ಸಿಂಗ್ ಲೋಧಿ ಅವರಿಗೆ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲೋಧಿ ಲೋಕಾಯುಕ್ತ ಅಧಿಕಾರಿಗಳಿಗೆ ಈ ಕುರಿತು ದೂರು ನೀಡಿದ್ದರು.
ತನಿಖೆ ನಡೆಸಿದ ಜಬಲ್ಪುರದ ಲೋಕಾಯುಕ್ತ ಪೊಲೀಸರ ತಂಡ ಗಜೇಂದ್ರ ಸಿಂಗ್ ಖಾಸಗಿ ಕಚೇರಿಗೆ ತಲುಪಿದೆ. ಗಜೇಂದ್ರ ಸಿಂಗ್ ಲೋಧಿ ಅವರಿಂದ ಲಂಚವನ್ನು ಸ್ವೀಕರಿಸುತ್ತಲೇ ದಾಳಿ ನಡೆಸಿ ಕಂದಾಯ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಆಗ ಗಜೇಂದ್ರ ಸಿಂಗ್ 5 ಸಾವಿರ ಲಂಚವನ್ನು ಜಗಿದು ನುಂಗಿದ್ದಾರೆ.
ಸದ್ಯ ಅವರ ಬಾಯಿಯಿಂದ ಲಂಚದ ನೋಟುಗಳನ್ನು ತಿರುಳಿನ ರೂಪದಲ್ಲಿ ಹೊರತೆಗೆಯಲಾಗಿದ್ದು, ಗಜೇಂದ್ರ ಸಿಂಗ್ ಆರೋಗ್ಯ ಸ್ಥಿರವಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.