5 ಸುಲಭ, ಆರೋಗ್ಯಕರ ಮತ್ತು ರುಚಿಕರ ತರಕಾರಿ ಚೆಟ್ನಿ, ಪಲ್ಯಗಳ ರೆಸಿಪಿಗಳು..!
1. ತೊಂಡೆಕಾಯಿ ಪಲ್ಯ
ಬೇಕಾಗುವ ಸಾಮಗ್ರಿಗಳು
ತೊಂಡೆಕಾಯಿ – 10
ಸಾಸಿವೆ – 1/2 ಚಮಚ
ಉದ್ದಿನಬೇಳೆ – 1/2 ಚಮಚ
ಒಣಮೆಣಸು – 1
ಕರಿಬೇವಿನ ಸೊಪ್ಪು – ಸ್ವಲ್ಪ
ತೆಂಗಿನಕಾಯಿ ತುರಿ – 2 ಚಮಚ
ಇಂಗು – ಚಿಟಿಕೆಯಷ್ಟು
ಜೀರಿಗೆ – 1/4 ಚಮಚ
ಬೆಲ್ಲ – ಸಣ್ಣ ತುಂಡು
ಬ್ಯಾಡಗಿ ಮೆಣಸು – 5
ಹುಣಸೆ ರಸ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ತೊಂಡೆಕಾಯಿಗಳನ್ನು ವೃತ್ತಾಕಾರವಾಗಿ ಹೆಚ್ಚಿ ನೀರಿನಲ್ಲಿ ಹಾಕಿ. ಬಳಿಕ ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಜೀರಿಗೆ, ಬೆಲ್ಲ, ಬ್ಯಾಡಗಿ ಮೆಣಸಿನಕಾಯಿ ಹಾಕಿ ತರಿ ತರಿಯಾಗಿ ರುಬ್ಬಿ ಮಸಾಲೆ ತಯಾರಿಸಿಕೊಳ್ಳಿ.
ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಉದ್ದಿನಬೇಳೆ, ಒಣ ಮೆಣಸಿನಕಾಯಿ, ಕರಿಬೇವು ಮತ್ತು ಇಂಗು ಸೇರಿಸಿ ಒಗ್ಗರಣೆ ಕೊಡಿ. ಇದಕ್ಕೆ ವೃತ್ತಾಕಾರವಾಗಿ ಹೆಚ್ಚಿದ ತೊಂಡೆಕಾಯಿಗಳನ್ನು ಸೇರಿಸಿ ಉಪ್ಪು ಹಾಗೂ ನೀರು ಸ್ವಲ್ಪ ಹಾಕಿ ಬೇಯಿಸಿ. ನಂತರ ಇದಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಿ. ಹುಣಸೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ನೀರು ಅವಿಯಾಗುವವರೆಗೆ ಬೇಯಿಸಿಕೊಳ್ಳಿ. ಈಗ ರುಚಿಯಾದ ತೊಂಡೆಕಾಯಿ ಪಲ್ಯ ಸವಿಯಲು ಸಿದ್ಧವಾಗಿದೆ.
2. ನುಗ್ಗೆ ಸೊಪ್ಪಿನ ಪಲ್ಯ
ಬೇಕಾಗುವ ಸಾಮಗ್ರಿಗಳು
ನುಗ್ಗೆಸೊಪ್ಪು – 1 ದೊಡ್ಡ ಕಟ್ಟು
ಶೇಂಗ ಬೀಜ – 1/2 ಕಪ್
ಮೆಣಸಿನ ಪುಡಿ – 1 ಚಮಚ
ಸಾಸಿವೆ – 1/2 ಚಮಚ
ಬೆಳ್ಳುಳ್ಳಿ – 2
ಕರಿಬೇವು – ಸ್ವಲ್ಪ
ಒಣ ಮೆಣಸು – 2
ಕಡಲೆ ಬೇಳೆ – 4 ಚಮಚ
ಉದ್ದಿನ ಬೇಳೆ – 2 ಚಮಚ
ಈರುಳ್ಳಿ – 1
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲು ನುಗ್ಗೆ ಸೊಪ್ಪನ್ನು ತೊಳೆದು ಸಣ್ಣಗೆ ಕತ್ತರಿಸಿ ಸ್ವಲ್ಪ ನೀರು ಉಪ್ಪು ಸೇರಿಸಿ ಬೇಯಿಸಿ. ನಂತರ ಮಿಕ್ಸಿ ಜಾರಿನಲ್ಲಿ ಹುರಿದ ಶೇಂಗಾ ಬೀಜ, ಮೆಣಸಿನ ಪುಡಿ, ಬೆಳ್ಳುಳ್ಳಿ ಸೇರಿಸಿ ರುಬ್ಬಿ.
ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಕರಿಬೇವು ಒಣಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ ಸೇರಿಸಿ ಹುರಿಯಿರಿ. ನಂತರ ಇದಕ್ಕೆ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಬಾಡಿಸಿಕೊಳ್ಳಿ. ಈಗ ಬೇಯಿಸಿದ ಸೊಪ್ಪು, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ರುಬ್ಬಿಟ್ಟುಕೊಂಡ ಶೇಂಗಾ ಮಿಶ್ರಣವನ್ನು ಸೇರಿಸಿ ಬೆರೆಸಿ. ಈಗ ರುಚಿಯಾದ ನುಗ್ಗೆಸೊಪ್ಪಿನ ಪಲ್ಯ ಸವಿಯಲು ಸಿದ್ಧ.
3. ಮೊಟ್ಟೆ ಪಲ್ಯ
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆಗಳು 4
ಕ್ಯಾಪ್ಸಿಕಂ 1
ಟೊಮೆಟೊ 1
ಎಣ್ಣೆ 4 ಟೀಸ್ಪೂನ್
ಅರಿಶಿನ ಪುಡಿ 1/2 ಟೀಸ್ಪೂನ್
ಜೀರಿಗೆ ಪುಡಿ 1 ಟೀಸ್ಪೂನ್
ಉಪ್ಪು 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ 1 ಟೀಸ್ಪೂನ್
ಎಗ್ ಮಸಾಲ ಪುಡಿ 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಬಾಣಲೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಸೇರಿಸಿ. ಅದು ಬಿಸಿಯಾದ ನಂತರ ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಟೊಮ್ಯಾಟೊ, ಅರಿಶಿನ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಮತ್ತು ಅದನ್ನು ಸರಿಯಾಗಿ ಬೆರೆಸಿ.
ಕಸೂರಿ ಮೇಥಿ ಇದ್ದರೆ ಅದನ್ನು ಸೇರಿಸಿ.
ಈಗ ಎಲ್ಲಾ 4 ಮೊಟ್ಟೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಿಧಾನವಾಗಿ ಬಾಣಲೆಗೆ ಸೇರಿಸಿ. ಈಗ ಅದಕ್ಕೆ ಎಗ್ ಮಸಾಲ ಪುಡಿಯನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ನಿಧಾನವಾಗಿ ಕಲಸಿ. ಮೊಟ್ಟೆಯ ಪ್ರತಿಯೊಂದು ಭಾಗದಲ್ಲೂ ಮಸಾಲೆ ಬೆರೆಯುವಂತೆ ಮಿಶ್ರ ಮಾಡಿ.
ಈಗ ಅಂತಿಮವಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ರುಚಿಯಾದ ಮೊಟ್ಟೆ ಪಲ್ಯ ಸವಿಯಲು ರೆಡಿ.
ಈ ಖಾದ್ಯವನ್ನು ನೀವು ಅನ್ನ ಮತ್ತು ಚಪಾತಿಯೊಂದಿಗೆ ಸೇವಿಸಬಹುದು.
4. ಸೋರೆಕಾಯಿ ಚಟ್ನಿ
ಬೇಕಾಗುವ ಸಾಮಾಗ್ರಿಗಳು
ಕಡಲೆಬೇಳೆ – ಸ್ವಲ್ಪ
ಉದ್ದಿನ ಬೇಳೆ – ಸ್ವಲ್ಪ
ಕೊಬ್ಬರಿ ತುರಿ – 1/2 ಕಪ್
ಒಣಮೆಣಸಿನಕಾಯಿ – 4
ಇಂಗು – ಚಿಟಿಕೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸೋರೆಕಾಯಿ ತುಂಡುಗಳು – 1 ಬಟ್ಟಲು
ಹುಣಸೆ ಹಣ್ಣು, ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲಿಗೆ ಸೋರೆಕಾಯಿ ತುಂಡುಗಳನ್ನು ಬೇಯಿಸಿ ಇಟ್ಟು ಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಡಲೆಬೇಳೆ, ಉದ್ದಿನ ಬೇಳೆ, ಕೊಬ್ಬರಿ ತುರಿ, ಒಣಮೆಣಸಿನಕಾಯಿ, ಇಂಗು ಗಳನ್ನು ಹುರಿದು ತೆಗೆಯಿರಿ.
ತಣ್ಣಗಾದ ನಂತರ ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣು, ಉಪ್ಪು ಸೇರಿಸಿ ರುಬ್ಬಿ . ಸ್ವಲ್ಪ ನುಣ್ಣಗಾದ ಬಳಿಕ ಬೇಯಿಸಿ ಇಟ್ಟುಕೊಂಡ ಸೋರೆಕಾಯಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿ.
ಇದನ್ನು ಅನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಇರುವುದರಿಂದ ಕಣ್ಣಿಗೆ ಒಳ್ಳೆಯದು.
ಕಡ್ಲೆಬೇಳೆ ಉಸ್ಲಿ
ಬೇಕಾಗುವ ಸಾಮಾಗ್ರಿಗಳು
ಕಡ್ಲೆಬೇಳೆ – 1ಕಪ್
ಸಾಸಿವೆ -1/2 ಚಮಚ
ಜೀರಿಗೆ – 1/4 ಚಮಚ
ಉದ್ದಿನ ಬೇಳೆ – 1/2 ಚಮಚ
ಹಸಿಮೆಣಸಿನಕಾಯಿ – 2
ಇಂಗು – ಚಿಟಕಿಯಷ್ಟು
ಅರಿಶಿನ ಪುಡಿ – 1/4 ಚಮಚ
ತೆಂಗಿನ ತುರಿ – 1/2 ಕಪ್
ನಿಂಬೆಹಣ್ಣು – 1/2
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಕಡ್ಲೆಬೇಳೆಯನ್ನು 2 ಗಂಟೆ ಕಾಲ ನೀರಿನಲ್ಲಿ ನೆನೆಹಾಕಿ. ನಂತರ ನೆನೆಸಿದ ಕಡ್ಲೆಬೇಳೆಯನ್ನು ದಪ್ಪ ತಳದ ಪಾತ್ರೆಯಲ್ಲಿ ಬೇಯಿಸಿ ಇಟ್ಟುಕೊಳ್ಳಿ. ಬಳಿಕ ನೀರನ್ನು ಸೋಸಿ, ಬೇಯಿಸಿದ ಕಡ್ಲೆಬೇಳೆಯನ್ನು ಪಕ್ಕದಲ್ಲಿರಿಸಿಕೊಳ್ಳಿ.
ಈಗ ಕಡಾಯಿಯಲ್ಲಿ ಎಣ್ಣೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ನಂತರ ಬಿಸಿಯಾದ ಎಣ್ಣೆಗೆ ಸಾಸಿವೆ ಸೇರಿಸಿ. ಅದು ಸಿಡಿಯಲು ಪ್ರಾರಂಭಿಸುತ್ತಿದ್ದಂತೆ ಜೀರಿಗೆ, ಉದ್ದಿನ ಬೇಳೆ, ಹಸಿರು ಮೆಣಸಿನ ಕಾಯಿ, ಅರಿಷಿಣ ಪುಡಿ ಮತ್ತು ಇಂಗು ಹಾಕಿ ಹುರಿಯಿರಿ. ನಂತರ ಇದಕ್ಕೆ ಬೇಯಿಸಿದ ಕಡ್ಲೆಬೇಳೆಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೆರೆಸಿ. ಈಗ ಇದಕ್ಕೆ ತೆಂಗಿನ ತುರಿ ಮತ್ತು ಲಿಂಬೆ ಹಣ್ಣಿನ ರಸ ಸೇರಿಸಿದರೆ ರುಚಿಕರವಾದ ಕಡ್ಲೆಬೇಳೆ ಉಸ್ಲಿ ಸವಿಯಲು ಸಿದ್ಧ.