ನದಿಯಲ್ಲಿ ಸ್ನಾನ ಮಾಡಲು ಹೋಗಿ 6 ಜನರು ನೀರುಪಾಲು
ಓಡಿಶಾ: ಹೋಳಿ ನಂತರ ನದಿಯಲ್ಲಿ ಸ್ನಾನ ಮಾಡಲು ಹೋಗಿ 6 ಜನ ಯುವಕರು ಸಾವನ್ನಪ್ಪಿರುವ ಘಟನೆ ಓಡಿಶಾದ ಜೈಪುರದಲ್ಲಿ ನಡೆದಿದೆ.
ಶನಿವಾರ ಓಡಿಶಾದ ಜೈಪುರದಲ್ಲಿ ಹೋಳಿಹಬ್ಬ ಆಚರಿಸಲಾಯಿತು. ಸಂಭ್ರಮಾಚರಣೆಯ ಬಳಿಕ ಇಲ್ಲಿನ ಖರಾಸೋತ್ರ ನದಿಗೆ ಸ್ನಾನ ಮಾಡಲು ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಅವರಲ್ಲಿ ಮೂರು ಯುವಕರ ಮೃತದೇಹವನ್ನು ಪತ್ತೆಹಚ್ಚಲಾಗಿದ್ದು, ಉಳಿದ ಮೂವರು ಯುವಕರ ಮೃತದೇಹ ಪತ್ತೆಹಚ್ಚಲು ಶೋಧಕಾರ್ಯ ನಡೆಸಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಇಬ್ಬರ ಮೃತದೇಹವನ್ನು ಹೊರ ತೆಗೆದ್ದಿದ್ದಾರೆ. ಈ ಕುರಿತು ಮಾತನಾಡಿದ ಜಿಲ್ಲಾ ಸಹಾಯಕ ಅಗ್ನಿಶಾಮಕ ಅಧಿಕಾರಿ ಪೂರ್ಣ ಚಂದ್ರ ಮರಾಂಡಿ, ನಾವು ಆಗಮಿಸುವ ಮೊದಲೇ ಸ್ಥಳೀಯರು ಒಬ್ಬ ಯುವಕನ ಮೃತದೇಹ ಹೊರತೆಗೆದಿದ್ದರು. ಬಳಿಕ ನಮ್ಮ ತಂಡವು ಕಾರ್ಯಾಚರಣೆ ನಡೆಸಿ, ಮತ್ತಿಬ್ಬರ ಮೃತದೇಹ ಪತ್ತೆಹಚ್ಚಲಾಯಿತು.
ಇನ್ನೂ ಶನಿವಾರ ರಾತ್ರಿ ಕಡಿಮೆ ಬೆಳಕಿನಿಂದ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಅಗ್ನಿಶಾಮಕ ಇಲಾಖೆ ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಭಾನುವಾರ ಬೆಳಿಗ್ಗೆ ಮತ್ತೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಮೃತನ ತಂದೆ ಸತ್ಯ ಚಂದ್ರ ಜೆನಾ ಮಾಹಿತಿ ನೀಡಿರುವ ಪ್ರಕಾರ, `ಶನಿವಾರ ಹೋಳಿ ಆಡಿದ ನಂತರ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಅವರಲ್ಲಿ ಒಬ್ಬ ಸ್ನೇಹಿತ ಮುಳುಗುತ್ತಿರುವುದನ್ನು ಗಮನಿಸಿ, ಉಳಿದವರೂ ಒಬ್ಬೊಬ್ಬರಾಗಿ ರಕ್ಷಿಸುವ ಪ್ರಯತ್ನದಲ್ಲಿ ಮುಳುಗಿದರು. ಕೊನೆಯದಾಗಿ ರಕ್ಷಿಸಲು ಹೋದ ನನ್ನ ಮಗನೂ ನದಿಯಲ್ಲಿ ಮುಳುಗಿದನು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.








