ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ 6 ವರ್ಷಗಳ ನಿಷೇಧ ಹೇರಿದರೆ ಸಾಕು ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಜೀವಮಾನವಿಡೀ ಅನರ್ಹತೆಗೊಳಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಕ್ರಿಮಿನಲ್ ಹಿನ್ನೆಲೆಯುಳ್ಳ ರಾಜಕಾರಣಿಗಳನ್ನು ಪೂರ್ತಿಯಾಗಿ ಚುನಾವಣಾ ಪ್ರಕ್ರಿಯೆಯಿಂದ ದೂರ ಇರಿಸಲು ಜೀವಮಾನ ನಿಷೇಧ ಹೇರಬೇಕೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಈಗಾಗಲೇ 6 ವರ್ಷಗಳ ಅನರ್ಹತೆಯ ನಿಯಮ ಅಸ್ತಿತ್ವದಲ್ಲಿದೆ. ಜೀವಮಾನವಿಡೀ ಅನರ್ಹತೆಗೊಳಿಸುವುದು ಸಾಧ್ಯವಿಲ್ಲ ಎಂದು ಕೇಂದ್ರ ತಿಳಿಸಿದೆ.
ಇದೇ ವಿಚಾರದಲ್ಲಿ ಜೀವಮಾನವಿಡೀ ಅನರ್ಹತೆ ಸೂಕ್ತವೇ? ಅಥವಾ ಅಲ್ಲವೇ? ಎಂಬ ಪ್ರಶ್ನೆ ಸಂಸತ್ತಿನ ವ್ಯಾಪ್ತಿಗೆ ಬರುತ್ತದೆ. ಇದನ್ನು ನಿರ್ಧರಿಸುವ ಅಧಿಕಾರ ಸದನಕ್ಕಿದೆ ಎಂದು ಸರ್ಕಾರ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ನ್ಯಾಯಾಂಗದ ಮಧ್ಯಸ್ಥಿಕೆಯಿಂದ ರಾಜಕೀಯ ವ್ಯಕ್ತಿಗಳಿಗೆ ಜೀವಮಾನ ನಿಷೇಧ ಹೇರಲು ಅವಕಾಶವಿದೆಯೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ಚರ್ಚೆ ನಡೆಸುತ್ತಿರುವ ಬೆನ್ನಲ್ಲೇ, ಚುನಾವಣೆ ಸ್ಪರ್ಧಿಸಲು 6 ವರ್ಷಗಳ ನಿರ್ಬಂಧವೇ ಅಪರಾಧ ನಿಯಂತ್ರಣಕ್ಕೆ ಸಾಕು ಎಂದು ಕೇಂದ್ರ ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ.








