75th Independence Day : ಕೆಂಪುಕೋಟೆಯಲ್ಲಿ ಪ್ರಧಾನಿ ಭಾಷಣ
ನವದೆಹಲಿ : ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ರಾಜಘಾಟ್ ಗೆ ಆಗಮಿಸಿ, ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು. ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸೋಮವಾರ ಧ್ವಜಾರೋಹಣ ನೆರವೇರಿಸಿದರು.
ಸದ್ಯ ದೇಶವನ್ನುದ್ದೇಶಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ನಾಯಕರನ್ನು ಮೊದಲು ಸ್ಮರಿಸಿದರು. ನಾವು ದೇಶವನ್ನು ಮುಂದಕ್ಕೆ ಕರೆದೊಯ್ಯುವ ಸಮಯ ಈಗ ಬಂದಿದೆ. ಪ್ರತಿ ತ್ಯಾಗವನ್ನೂ ಗೌರವಿಸುತ್ತೇವೆ. ಪ್ರತಿ ನಾಯಕರ ಕನಸನ್ನು ಈಡೇರಿಸುತ್ತೇವೆ. ಸ್ವಾತಂತ್ರ್ಯದ ಮಹೋತ್ಸವದ ವೇಳೆ ನಾವು ಅನೇಕ ರಾಷ್ಟ್ರೀಯ ನಾಯಕರನ್ನು ಸ್ಮರಿಸುತ್ತಿದ್ದೇವೆ. ಆಗಸ್ಟ್ 14ರಂದು ನಾವು ದೇಶ ವಿಭಜನೆಯ ಭಯಾನಕತೆಯನ್ನು ಸ್ಮರಿಸಿದ್ದೇವೆ. ಇಂದು ಕಳೆದ 75 ವರ್ಷಗಳಲ್ಲಿ ನಮ್ಮ ದೇಶವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಕೊಡುಗೆ ನೀಡಿದ ಎಲ್ಲ ನಾಗರಿಕರನ್ನು ನೆನಪಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

75 ವರ್ಷದ ಈ ಯಾತ್ರೆಯಲ್ಲಿ ಹಲವು ಏಳು ಬೀಳಗಳನ್ನು ಕಂಡಿದ್ದೇವೆ. ಸುಖ–ದುಃಖಗಳನ್ನು ಕಂಡಿದ್ದೇವೆ. ಇವುಗಳ ನಡುವೆ ಭಾರತವನ್ನು ಕಟ್ಟಿದ್ದೇವೆ. ಎಲ್ಲೂ ಸೋಲನ್ನು ಒಪ್ಪಿಕೊಂಡಿಲ್ಲಎಂದರು.
ಇದೇ ವೇಳೆ ಭಾರತವು ಪ್ರಜಾಪ್ರಭುತ್ವದ ತಾಯಿ ಎಂದ ಪ್ರಧಾನಿ, ಮುಂದಿನ ವರ್ಷಗಳಲ್ಲಿ ನಾವು ‘ಪಂಚಪ್ರಾಣ’ದ ಕಡೆ ಗಮನ ಹರಿಸಬೇಕಿದೆ. ಮೊದಲನೆಯದು, ನಾವು ಇನ್ನೂ ದೊಡ್ಡ ಪರಿಹಾರದೊಂದಿಗೆ ಮುಂದೆ ಸಾಗಬೇಕು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಸಾಧಿಸಬೇಕು; ಎರಡನೆಯದು, ದಾಸ್ಯದ ಎಲ್ಲ ಗುರುತುಗಳನ್ನೂ ಅಳಿಸಿ ಹಾಕಬೇಕು; ಮೂರನೇಯದು, ನಮ್ಮ ಪರಂಪರೆ ಬಗ್ಗೆ ಹೆಮ್ಮೆ ಪಡುವುದು; ನಾಲ್ಕನೇಯದು, ಒಗ್ಗಟ್ಟಿನ ಬಲ ಮತ್ತು ಐದನೇಯದು, ಪ್ರಧಾನಿ ಮತ್ತು ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ನಾಗರಿಕರ ಕರ್ತವ್ಯಗಳು ಎಂದು ವಿವರಿಸಿದರು.