ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದ 85 ಲಕ್ಷದ ಚಿನ್ನಾಭರಣ ಕಳವು
ಬೆಂಗಳೂರು, ಅಗಸ್ಟ್ 3: ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದ ಚಿನ್ನಾಭರಣ ನಾಪತ್ತೆಯಾಗಿದೆ ಎಂದು ಉದ್ಯಮಿಯೊಬ್ಬರು ಬ್ಯಾಂಕ್ ವಿರುದ್ಧ ದೂರು ದಾಖಲಿಸಿದ್ದಾರೆ. ಉದ್ಯಮಿ ಜಯನಗರ ಪೊಲೀಸರಿಗೆ ಬ್ಯಾಂಕ್ ವಿರುದ್ಧ ದೂರು ನೀಡಿದ್ದು, ತನ್ನ ಲಾಕರ್‌ನಿಂದ 85 ಲಕ್ಷ ರೂ.ಗಳ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆದಾಗ್ಯೂ, ಇದು ಸುಳ್ಳು ದೂರು ಎಂದು ಬ್ಯಾಂಕ್ ಹೇಳುತ್ತಿದೆ.
ಜೆ.ಪಿ.ನಗರದ ನಿವಾಸಿ ಶಿವಪ್ರಸಾದ್ ಆರ್ (52) ಅವರು ತಮ್ಮ ದೂರಿನಲ್ಲಿ ಫೆಬ್ರವರಿ 27 ರಂದು ತಮ್ಮ ಲಾಕರ್‌ನಿಂದ ಸ್ವಲ್ಪ ಚಿನ್ನವನ್ನು ತೆಗೆದುಕೊಂಡಿದ್ದೆ. ಆದರೆ ಲಾಕ್‌ಡೌನ್ ಕಾರಣ ಅದನ್ನು ಹಿಂತಿರುಗಿಸಲು ಸಾಧ್ಯವಾಗಲಿಲ್ಲ ಎಂದು ಬರೆದಿದ್ದಾರೆ. ನಾನು ಜುಲೈ 22 ರಂದು ಬ್ಯಾಂಕಿಗೆ ಹೋದಾಗ, ಆಭರಣಗಳು ಇರಲಿಲ್ಲ. ಲಾಕರ್ನಲ್ಲಿದ್ದ 50 ಗ್ರಾಂ ಚೈನು, 30 ಗ್ರಾಂ ಬ್ರೇಸ್ಲೆಟ್, 40 ಗ್ರಾಂನ ಬಳೆ, 1200 ಗ್ರಾಂ ನ 12 ಚಿನ್ನದ ಗಟ್ಟಿ ಸೇರಿದಂತೆ ಸುಮಾರು 85 ಲಕ್ಷ ಮೌಲ್ಯದ 1,735 ಗ್ರಾಂ ಚಿನ್ನಾಭರಣ ಲಾಕರ್ ನಲ್ಲಿ ಕಾಣುತ್ತಿಲ್ಲ. ನಾನು ಫೆಬ್ರವರಿ 27ರಿಂದ ಜುಲೈ 22ರವರೆಗೂ ಬ್ಯಾಂಕಿನ ಕಡೆಗೆ ಹೋಗಿಲ್ಲ. ಹೀಗಾಗಿ ಬ್ಯಾಂಕ್ ಸಿಬ್ಬಂದಿ ಅಥವಾ ಬ್ಯಾಂಕಿಗೆ ಬಂದ ಅಪರಿಚಿತರು ಚಿನ್ನಾಭರಣವನ್ನು ಕಳವು ಮಾಡಿದ್ದಾರೆ ಎಂದು ಅವರು ಹೇಳಿದರು. ಅವರ ದೂರಿನ ಪ್ರಕಾರ ವಿಶ್ವಾಸಾರ್ಹ ಉಲ್ಲಂಘನೆಯ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು, ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.
ಆಂತರಿಕ ತನಿಖೆ ನಡೆಸಲಾಗಿದ್ದು, ಯಾವುದೇ ಕಳ್ಳತನ ನಡೆದಿಲ್ಲ ಎಂದು ತಿಳಿದುಬಂದಿದೆ ಎಂದು ಹಿರಿಯ ಬ್ಯಾಂಕ್ ಅಧಿಕಾರಿ ತಿಳಿಸಿದ್ದಾರೆ.