ನವದೆಹಲಿ : ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾ ನಗರದ ಸಮೀಪ ಭದ್ರತಾ ಪಡೆಗಳು ಸತತ 8 ಗಂಟೆಗಳ ಕಾಲ ಉಗ್ರರ ವಿರುದ್ಧ ನಡೆಸಿದ ಎನ್ ಕೌಂಟರ್ ಕಾರ್ಯಾಚರಣೆ ಭಾನುವಾರ ಬೆಳಗ್ಗೆ ಅಂತ್ಯಗೊಂಡಿದೆ. ಇದರಲ್ಲಿ ಒಬ್ಬರು ಕರ್ನಲ್, ಮೇಜರ್, ಇಬ್ಬರು ಸೇನಾ ಯೋಧರು ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುತಾತ್ಮರಾಗಿದ್ದು, ಪ್ರತಿದಾಳಿಗೆ ಇಬ್ಬರು ಉಗ್ರರು ಬಲಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ .
ಭದ್ರತಾ ಪಡೆಯ ಮೇಜರ್ ಸೂದ್, ನಾಯಕ್ ರಾಜೇಶ್ ಮತ್ತು ಲ್ಯಾನ್ಸ್ ನಾಯಕ್ ದಿನೇಶ್ ಕಾರ್ಯಾಚರಣೆಯಲ್ಲಿ ಹುತಾತ್ಮಾಗಿರುವುದಾಗಿ ವರದಿ ವಿವರಿಸಿದೆ. ಹಂದ್ವಾರಾದ ಚಾಂಗಿಮುಲ್ಲಾ ಮನೆಯೊಂದರ ಒಳಗೆ ನಾಗರಿಕರನ್ನು ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಇದರ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.
ಉಗ್ರರು ಅಡಗಿದ್ದ ಮನೆಯ ಪ್ರದೇಶದೊಳಕ್ಕೆ ಐವರು ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಇಳಿದಿತ್ತು. ದಿಟ್ಟತನದ ಹೋರಾಟದಲ್ಲಿ ನಾಗರಿಕರನ್ನು ರಕ್ಷಿಸುವಲ್ಲಿ ತಂಡ ಯಶಸ್ವಿಯಾಗಿದ್ದು, ಈ ವೇಳೆ ಉಗ್ರರು ನಡೆಸಿದ ಭಾರೀ ಗುಂಡಿನ ದಾಳಿಗೆ ಐವರು ಯೋಧರು ಹುತಾತ್ಮರಾಗಿದ್ದಾರೆ.