ನವದೆಹಲಿ : ನೂತನ ಸಂಸತ್ ಕಟ್ಟಡವನ್ನು ನಿರ್ಮಿಸುವ ಕೇಂದ್ರ ಸರ್ಕಾರದ ಯೋಜನೆಯನ್ನು ಏಪ್ರಿಲ್ 23 ರಂದು ನಡೆದ ಸಭೆಯಲ್ಲಿ ಕೇಂದ್ರ ವಿಸ್ಟಾ ಸಮಿತಿಯು ಅಂಗೀಕರಿಸಿತ್ತು. ಈ ನೂತನ ಸಂಸತ್ತಿನ ನಿರ್ಮಾಣವು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ 3 ಕಿ.ಮೀ ಉದ್ದದವರೆಗೆ ಪುನರುಜ್ಜೀವನಗೊಳಿಸುವ ಸೆಂಟ್ರಲ್ ವಿಸ್ಟಾದ ಒಂದು ಭಾಗವಾಗಿದೆ. ಈಗ ಅಸ್ತಿತ್ವದಲ್ಲಿರುವ ಕಟ್ಟಡದ ಎದುರು ಹೊಸ ತ್ರಿಕೋನಾಕಾರದಲ್ಲಿ ಸಂಸತ್ತನ್ನು ನಿರ್ಮಿಸುವುದು ಹಾಗೂ ಇದರಲ್ಲಿ ಎಲ್ಲಾ ಸಚಿವಾಲಯಗಳಿಗೆ ಕೇಂದ್ರ ಕಾರ್ಯದರ್ಶಿ ಕಚೇರಿಗಳನ್ನು ನಿರ್ಮಿಸುವುದು ಈ ಯೋಜನೆ ಒಳಗೊಂಡಿದೆ. ಈ ಯೋಜನೆಗೆ ಅಂದಾಜು 922 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಸಿಪಿಡಬ್ಲ್ಯೂಡಿ ಹೇಳಿದೆ.
ಕಾಂಗ್ರೆಸ್ ನಿಂದ ವಿರೋಧ
ನೂತನ ಸಂಸತ್ ಕಟ್ಟಡ ನಿರ್ಮಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಕೊರೊನಾ ಆತಂಕ ಎದುರಾಗಿರುವ ಈ ಸಂದರ್ಭದಲ್ಲಿ ಈ ಯೋಜನೆಯನ್ನು ರದ್ದುಗೊಳಿಸುವಂತೆ ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಈ ಯೋಜನೆಯ ವಿರುದ್ಧದ ಅರ್ಜಿಗಳಿಗೆ ಆದ್ಯತೆ ನೀಡುವಂತೆ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಸುಪ್ರಿಂಕೋರ್ಟ್ ನ್ನು ಒತ್ತಾಯಿಸಿದ್ದಾರೆ.
ಇಡೀ ದೇಶ ಕೊರೊನಾ ವೈರಸ್ ಬಿಕ್ಕಟ್ಟಿನ ಅಡಿಯಲ್ಲಿ ತತ್ತರಿಸುತ್ತಿದೆ. ಇಂಥ ಸಂದರ್ಭದಲ್ಲಿ 20,000 ಕೋಟಿ ರೂಪಾಯಿಯ ಪುನರಾಭಿವೃದ್ಧಿ ಯೋಜನೆಯು ಸರ್ಕಾರದ ಕೊನೆಯ ಆದ್ಯತೆಯಾಗಿರಬೇಕು. ಈ ಯೋಜನೆಯ ವಿಚಾರವಾಗಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಬೇಕು. ಇಂಥ ಪರಿಸ್ಥಿತಿಯಲ್ಲಿ ಈ ಯೋಜನೆಯನ್ನು ಕೊನೆಯ ಆದ್ಯತೆಯಾಗಿಟ್ಟುಕೊಳ್ಳುವಂತೆ ಸೂಚಿಸಬೇಕೆಂದು ಅಭಿಷೇಕ್ ಸಿಂಘ್ವಿ ಒತ್ತಾಯಿಸಿದ್ದಾರೆ.