NDRF ನಿಧಿಯಡಿ ರಾಜ್ಯಕ್ಕೆ 941 ಕೋಟಿ ರೂ ಮಂಜೂರು; ಮೋದಿ ಗೆ ಧನ್ಯವಾದ ಅರ್ಪಿಸಿದ ಸಿಎಂ
ಕಳೆದ ವರ್ಷ ಕರ್ನಾಟಕದಲ್ಲಿಆದ ಮಳೆ ಮತ್ತು ಪ್ರವಾಹದ ಪರಿಸ್ಥಿತಿಯನ್ನಆಧರಿಸಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚುವರಿಯಾಗಿ 941 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಹೆಚ್ಚುವರಿಯಾಗಿ 1816.162 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ.
ರಾಜ್ಯಕ್ಕೆ ಹೆಚ್ಚುವರಿಯಾಗಿ ಹಣ ಬಿಡುಗಡೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಸಿ ಎಂ 2022ರ ಅವಧಿಯಲ್ಲಿ ಉಂಟಾದ ಪ್ರವಾಹ, ಭೂ ಕುಸಿತ, ಅತಿವೃಷ್ಟಿಯಿಂದ ಹಾನಿಗೊಳಗಾಗಿದ್ದ ರಾಜ್ಯಕ್ಕೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಹೆಚ್ಚುವರಿಯಾಗಿ ₹941.04 ಕೋಟಿಯನ್ನು ಮಂಜೂರು ಮಾಡಿದ್ದು, ಸಹಜವಾಗಿಯೇ ಹರ್ಷ ತಂದಿದೆ. ಕರ್ನಾಟಕದ ಬಗೆಗಿನ ವಿಶೇಷ ಕಾಳಜಿಗಾಗಿ, ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಕರ್ನಾಟಕಕ್ಕೆ 941.04 ಕೋಟಿ, ಅಸ್ಸಾಂಗೆ 520.466 ರೂ, ಹಿಮಾಚಲ ಪ್ರದೇಶಕ್ಕೆ 239.31 ಕೋಟಿ ರೂ, ಮೇಘಾಲಯಕ್ಕೆ 47.326 ಕೋಟಿ ರೂಪಾಯಿ ಮತ್ತು ನಾಗಾಲ್ಯಾಂಡ್ಗೆ 68.02 ಕೋಟಿ ರುಪಾಯಿ ಹೆಚ್ಚುವರಿ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ.
941 crore sanctioned to the state under NDRF fund; CM thanked Modi