ಬುದ್ದಿವಂತ ಮತದಾರರು ಜೆಡಿಎಸ್ ಗೆ ಮತ ಹಾಕೋದಿಲ್ಲ : ಸಿದ್ದರಾಮಯ್ಯ
ವಿಜಯಪುರ : ಜೆಡಿ(ಎಸ್) ಪಕ್ಷದವರು ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರ ಹಿಂದಿನ ಉದ್ದೇಶ ಏನೇ ಇರಬಹುದು, ಆದರೆ ಮತದಾರರು ಮೂರ್ಖರಲ್ಲ. ಜೆಡಿಎಸ್ ಉದ್ದೇಶ ಏನೇ ಇದ್ದರೂ ಬುದ್ದಿವಂತ ಮತದಾರರು ಅವರಿಗೆ ಮತ ಹಾಕುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಂದಗಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಕಾಂಗ್ರೆಸ್ಗೆ ಬಯಸದೆ ಬಂದ ಭಾಗ್ಯ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತದಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿವೆ. ಜನರಿಗೆ ಕಣ್ಣಿರಲ್ಲಿ ಕೈತೊಳೆಯುವಂತಹ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಬೇಸತ್ತಿರುವ ಮತದಾರರು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರ ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ರ್ಯಾಲಿಯಲ್ಲಿ ಸಿದ್ದರಾಮಯ್ಯರು ಭಾಗಿಯಾಗಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಂ.ಸಿ ಮನಗೂಳಿ ಅವರು ಈ ಹಿಂದೆ ನನ್ನನ್ನು ಭೇಟಿಯಾಗಿ, ನನ್ನ ಮಗ ರಾಜಕೀಯವಾಗಿ ಬೆಳೆಯಬೇಕು ಹಾಗಾಗಿ ಅವನನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಈಗ ಅವರು ನಮ್ಮೊಂದಿಗಿಲ್ಲ, ಆದರೆ ಅವರ ಆಸೆಯನ್ನು ಈಡೇರಿಸುವ ಹೊಣೆ ನಮ್ಮ ಮೇಲಿದೆ.
ಜಿಲ್ಲೆಯ ಕಾಂಗ್ರೆಸ್ ನಾಯಕರ ಒಮ್ಮತದ ಅಭಿಪ್ರಾಯದ ಮೇರೆಗೆ ಸಿಂಧಗಿ ವಿಧಾನಸಭಾ ಕ್ಷೇತ್ರದಿಂದ ಎಂ.ಸಿ ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರಿಗೆ ಪಕ್ಷದ ಟಿಕೆಟ್ ನೀಡಿದ್ದೇವೆ. ಕ್ಷೇತ್ರದ ಜನರ ಒಲವು ಮತ್ತು ಪಕ್ಷದ ನಾಯಕರ ಉತ್ಸಾಹವನ್ನು ಗಮನಿಸಿದರೆ ಗರಿಷ್ಠ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.









