Supreme Court | ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ : ದ್ವೇಷಭಾಷಣಕ್ಕೆ ಕಡಿವಾಣ
ನವದೆಹಲಿ : 21 ನೇ ಶತಮಾನದಲ್ಲೂ ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ ಎಂದು ದ್ವೇಷದ ಭಾಷಣದ ಬಗ್ಗೆ ಸುಪ್ರೀಂ ಕೋರ್ಟ್ ಅಸಹನೆ ಹೊರಹಾಕಿದೆ.
ಅಲ್ಲದೆ ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ಕ್ರಮ ತೆಗೆದುಕೊಳ್ಳಿ ಎಂದು ಮೂರು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ದೆಹಲಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ನಡೆದಿದ್ದ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಕೆಲವರು ಮುಸ್ಲಿಮರ ವಿರುದ್ಧ ನೀಡಿದ್ದ ದ್ವೇಷಪೂರಿತ ಹೇಳಿಕೆಗಳು ಮತ್ತು ಪ್ರಚೋದನಕಾರಿ ಕರೆಗಳ ವಿರುದ್ಧ ಶಹೀನ್ ಅಬ್ದುಲ್ಲಾ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಋಷಿಕೇಶ್ ರಾಯ್ ಅವರಿದ್ದ ಪೀಠವು ವಿಚಾರಣೆ ನಡೆಸಿತು.
ಈ ವೇಳೆ ಸಂವಿಧಾನದ 51 ನೇ ಎ ವಿಧಿಯು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳುತ್ತದೆ.
ಆದ್ರೆ 21 ನೇ ಶತಮಾನದಲ್ಲಿ ನಾವು ಧರ್ಮದ ಹೆಸರಿನಲ್ಲಿ ಎಷ್ಟು ಸಂಕುಚಿತರಾಗಿದ್ದೇವೆ ಎಂದು ಪೀಠವು ಆಘಾತ ವ್ಯಕ್ತಪಡಿಸಿದೆ.
ಅಲ್ಲದೇ ಈ ರೀತಿ ದ್ವೇಷದ ಭಾಷಣ ಮಾಡುವವರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಕ್ರಮ ತೆಗೆದುಕೊಂಡ ಬಗ್ಗೆ ವರದಿ ನೀಡಬೇಕು ಎಂದು ಪೀಠವು ಆದೇಶಿಸಿದೆ.








