ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ವರ್ಗಾವಣೆ
ಚಾಮರಾಜನಗರ : ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 37 ಕೋವಿಡ್ ಸೋಂಕಿತರ ಸಾವಿಗೆ ಪರೋಕ್ಷವಾಗಿ ಕಾರಣರಾಗದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿರವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ರವರಿಗೆ ಯಾವುದೇ ಸ್ಥಳ ತೋರಿಸದೇ ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಸ್ಥಳ ನಿರೀಕ್ಷೆಯಲ್ಲಿದ್ದ ಜಲಾಯನ ಅಭಿವೃದ್ದಿ ಇಲಾಖೆಯ ನಿರ್ದೇಶಕರಾಗಿದ್ದ ಸತೀಶ್ ರವರನ್ನು ತಕ್ಷಣವೇ ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುವಂತೆ ಸರ್ಕಾರ ಸೂಚಿಸಿದೆ.
ರಾಜ್ಯ ಸರ್ಕಾರದ ಸೂಚನೆಯಂತೆ ಜಲಾಯನ ಅಭಿವೃದ್ದಿ ಇಲಾಖೆಯ ನಿರ್ದೇಶಕರಾಗಿದ್ದ ಹಾಗೂ ಸ್ಥಳ ನಿರೀಕ್ಷೆಯಲ್ಲಿ ಸತೀಶ್ ರವರು ಬೆಂಗಳೂರಿನಿಂದ ಚಾಮರಾಜನಗರದತ್ತ ಸಂಚಾರ ಮಾಡುತ್ತಿದ್ದಾರೆ.
ಸತೀಶ್ ರವರಿಗೆ ಜನವರಿ ತಿಂಗಳಲ್ಲೇ ಚಾಮರಾಜನಗರ ಜಿಲ್ಲಾಧಿಕಾರಿಗಳಾಗಿ ವರ್ಗಾವಣೆಯಾಗಿತ್ತು. ಆದರೆ ಕೆಲವು ರಾಜಕಾರಣಿಗಳ ಮೂಲಕ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ವರ್ಗಾವಣೆ ಆದೇಶಕ್ಕೆ ಮೌಖಿಕವಾಗಿ ತಡೆಯೊಡ್ಡಿದ್ದರು.
ಮೇ 2 ರ ರಾತ್ರಿ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ಕೊರತೆಯಿಂದ 37 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ಆದೇಶದ ಮೇರೆಗೆ ನಿವೃತ್ತ ನ್ಯಾಯಮೂರ್ತಿಗಳ ತಂಡ ಸಮಗ್ರವಾಗಿ ತನಿಖೆ ನಡೆಸಿ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ರವರ ಕರ್ತವ್ಯ ಲೋಪ ಸಾಭೀತಾಗಿದ್ದು, ಕ್ರಮ ವಹಿಸುವಂತೆ ವರದಿಯಲ್ಲಿ ಉಲ್ಲೇಖವಾಗಿತ್ತು.
ಹೈ ಕೋರ್ಟ್ ಸಹ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ, ಮುಂದಿನ ವಿಚಾರಣೆ ವೇಳೆಗೆ ತಪ್ಪಿತಸ್ಥರೊಂದಿಗೆ ಸೂಚಿಸಿರುವವರ ಮೇಲೆ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದರಿಂದ ಸರ್ಕಾರವು ತರಾತುರಿಯಲ್ಲಿ ವರ್ಗಾವಣೆ ಆದೇಶ ಅನುಷ್ಠಾನಕ್ಕೆ ಮುಂದಾಗಿದೆ.










