ಕಾಣೆಯಾಗಿದ್ದ ಬ್ರಿಟನ್ ನ ರಹಸ್ಯ ರಕ್ಷಣಾ ದಾಖಲೆಗಳು ಕಸದ ರಾಶಿಯಲ್ಲಿ ಪತ್ತೆ..!
ಬ್ರಿಟನ್ : ಬ್ರಿಟನ್ನ ಕೆಲವು ರಕ್ಷಣಾ ದಾಖಲೆಗಳು ನಾಪತ್ತೆಯಾಗಿರುವುದಾಗಿ ಕಳೆದ ವಾರ ಬ್ರಿಟನ್ನ ರಕ್ಷಣಾ ಸಚಿವಾಲಯದ ಉದ್ಯೋಗಿಯೊಬ್ಬರು ದೂರು ನೀಡಿದ್ದರು. ಯುದ್ಧನೌಕೆ ಹಾಗೂ ಬ್ರಿಟಿಶ್ ಸೇನೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಒಳಗೊಂಡ ವರ್ಗೀಕೃತ ದಾಖಲೆಗಳು ಇವಾಗಿದ್ದು, ಇದೀಗ ಕಸದ ರಾಶಿಯಲ್ಲಿ ಪತ್ತೆಯಾಗಿರೋದಾಗಿ ತಿಳಿದುಬಂದಿದೆ..
ಹೌದು.. ಆಗ್ನೇಯ ಇಂಗ್ಲೆಂಡ್ ನ ಬಸ್ ನಿಲ್ದಾಣವೊಂದರಲ್ಲಿ ನಾಪತ್ತೆಯಾಗಿದ್ದ ದಾಖಲೆಗಳು ಪತ್ತೆಯಾಗಿರುವುದಾಗಿ ಅಲ್ಲಿನ ಮಾಧ್ಯಮಗಳು ಬವರದಿ ಮಾಡಿವೆ.. ಈ ದಾಖಲೆಗಳನ್ನು ಮಂಗಳವಾರ ಬೆಳಗ್ಗೆ ಕೆಂಟ್ ನಗರದ ಬಸ್ ನಿಲ್ದಾಣದ ಹಿಂದುಗಡೆಯಿರುವ ರದ್ದಿಯ ರಾಶಿಯಲ್ಲಿ ಸಾರ್ವಜನಿಕರೊಬ್ಬರು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ ..
ಈ ದಾಖಲೆಗಳ ಪೈಕಿ ಉಕ್ರೇನ್ನ ಕ್ರಿಮಿಯಾ ಸಮೀಪದ ಸಾಗರಪ್ರದೇಶದಲ್ಲಿ ಬುಧವಾರ ಹಾದುಹೋಗಲಿರುವ ಬ್ರಿಟನ್ನ ಎಚ್‌ಎಂಎಸ್ ಡಿಫೆಂಡರ್ ಯುದ್ಧನೌಕೆಗೆ ರಶ್ಯದ ಪ್ರತಿಕ್ರಿಯೆಯನ್ನು ಹೇಗಿರಬಹುದೆಂದು ಚರ್ಚಿಸಲಾಗಿತ್ತು ಹಾಗೂ ಇನ್ನೊಂದು ದಾಖಲೆಯಲ್ಲಿ ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳು ಈ ವರ್ಷಾಂತ್ಯದಲ್ಲಿ ಅಫ್ಘಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆಯನ್ನು ಕೊನೆಗೊಳಿಸಿದ ಬಳಿಕ ಆ ದೇಶದಲ್ಲಿ ಬ್ರಿಟನ್ನ ಸಂಭಾವ್ಯ ಉಪಸ್ಥಿತಿಯ ಕುರಿತಾದ ಯೋಜನೆಗಳನ್ನು ಹೊಂದಿತ್ತು ಎನ್ನಲಾಗಿದೆ.
50ಕ್ಕೂ ಅಧಿಕ ಪುಟಗಳನ್ನು ಒಳಗೊಂಡಿದ್ದ ಈ ದಾಖಲೆಗಳು ಅತ್ಯಂತ ಸೂಕ್ಷ್ಮವಾದ ವಿಷಯಗಳನ್ನು ಒಳಗೊಂಡಿವೆಯೆಂದು ಅರಿತ ಸಾರ್ವಜನಿಕರು ಈ ಬಗ್ಗೆ ಸುದ್ದಿ ಸಂಸ್ಥೆಯೊಂದರ ಜೊತೆಗೆ ಮಾಹಿತಿ ಹಂಚಿಕೊಂಡ ನಂತರ ಈ ವಿಚಾರ ಬೆಳಕಿಗೆ ಬಂದಿದೆ.. ಬ್ರಿಟನ್ ನ ಮಹತ್ವದ ರಕ್ಷಣಾ ದಾಖಲೆಗಳು ನಿಗೂಢವಾಗಿ ನಾಪತ್ತೆಯಾದ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.








