ಯುಎಇಗೆ ಟಿ20 ವಿಶ್ವಕಪ್ ಟೂರ್ನಿ ಶಿಫ್ಟ್ : ಬಿಸಿಸಿಐ ಘೋಷಣೆ
ಬೆಂಗಳೂರು : ದೇಶದಲ್ಲಿ ಕೊರೊನಾ ಸೋಂಕು ಆತಂಕದ ಹಿನ್ನೆಲೆಯಲ್ಲಿ ಈ ವರ್ಷ ಭಾರತದಲ್ಲಿ ನಡೆಯಬೇಕಿದ್ದ ಟಿ 20 ವಿಶ್ವಕಪ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಯುಎಇಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಘೋಷಣೆ ಮಾಡಿದೆ.
ಈ ಕುರಿತು ಮಾಹಿತಿ ನೀಡಿದ ಬಿಸಿಸಿಐ ಕಾರ್ಯದರ್ಶಿ ಜೇ ಶಾ, ‘ನಾವು ಟಿ20 ವಿಶ್ವಕಪ್ ಅನ್ನು ಯುಎಇಗೆ ಸ್ಥಳಾಂತರಿಸುತ್ತಿದ್ದೇವೆ ಎಂದು ಇಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದೇವೆ. ಪಂದ್ಯಾವಳಿಗಳ ದಿನಾಂಕಗಳನ್ನು ಐಸಿಸಿ ನಿರ್ಧರಿಸುತ್ತದೆ’ ಎಂದಿದ್ದಾರೆ.
ಈ ಹಿಂದೆ ಭಾರತದಲ್ಲಿ ಟಿ20 ವಿಶ್ವಕಪ್ ಆಯೋಜಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ಜೂ.28ರೊಳಗೆ ಪ್ರಕಟಿಸುವಂತೆ ಬಿಸಿಸಿಐಗೆ ಐಸಿಸಿ ನಿರ್ದೇಶಿಸಿತ್ತು. ಆದರೆ ಭಾರತದಲ್ಲಿ ಇನ್ನೂ ಕೂಡ ಕೊರೋನಾ ನಿಯಂತ್ರಣಕ್ಕೆ ಬಾರದಿರುವ ಕಾರಣ, ವಿದೇಶದಲ್ಲಿ ಟೂರ್ನಿಯ ಆಯೋಜಿಸುವಂತೆ ಇಂದು ನಡೆದ ಸಭೆಯಲ್ಲಿ ಐಸಿಸಿ ತಿಳಿಸಿದೆ. ಅದರಂತೆ ಟಿ20 ವಿಶ್ವಕಪ್ ಯುಎಇ ಹಾಗೂ ಒಮಾನ್ ದೇಶಗಳಲ್ಲಿ ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.
ಈ ಬಾರಿ ಟಿ20 ವಿಶ್ವಕಪ್‍ನಲ್ಲಿ 16 ತಂಡಗಳು ಪಾಲ್ಗೊಳ್ಳಲಿವೆ. ಟಿ20 ಕ್ರಿಕೆಟ್‍ನಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಎಂಟು ದೇಶಗಳು ನೇರವಾಗಿ ಸೂಪರ್ 12 ಹಂತ ಪ್ರವೇಶ ಪಡೆಯಲಿವೆ. ಅಂದರೆ, ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಫ್ಘನಿಸ್ತಾನ ತಂಡಗಳು ನೇರವಾಗಿ ಸೂಪರ್ 12 ಹಂತದಿಂದ ಟಿ20 ಅಭಿಯಾನ ಆರಂಭಿಸುತ್ತವೆ.