ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳು ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಹೊಸ ಸವಾಲುಗಳನ್ನು ಹುಟ್ಟು ಹಾಕುತ್ತಿದೆ – ರಾಜನಾಥ್ ಸಿಂಗ್
ನವದೆಹಲಿ : ನಮ್ಮ ದೇಶದ ರಕ್ಷಣೆಗಾಗಿ ಅಗತ್ಯ ಬಿದ್ದರೆ ಭಯೋತ್ಪಾದಕ ದೇಶದ ನೆಲಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ತೊಡೆತಟ್ಟಿದ್ದರು. ಇದೀಗ ಅಫ್ಗಾನಿಸ್ತಾನದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಹೊಸ ಸವಾಲುಗಳನ್ನು ಹುಟ್ಟು ಹಾಕುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಆದ್ರೆ ಇದರಿಂದ ಉಂಟಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರ ಸಮರ್ಥವಾಗಿದೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ಅಫ್ಗಾನಿಸ್ತಾನದಲ್ಲಿನ ಈ ಬೆಳವಣಿಗೆಗಳ ಲಾಭವನ್ನು ಬಳಸಿಕೊಂಡು ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಲು ಯಾವುದೇ ದೇಶವಿರೋಧಿ ಶಕ್ತಿಗೆ ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು , ಭಾರತದ ವಿರುದ್ಧ 2 ಯುದ್ಧಗಳಲ್ಲಿ ಸೋತು ಸುಣ್ಣವಾಗಿರುವ ದೇಶ ( ಪಾಕಿಸ್ತಾನ) ನಮ್ಮ ವಿರುದ್ಧ ಇದೀಗ ಛಾಯಾ ಸಮರ ಆರಂಭಿಸಿದೆ. ಆ ದೇಶದ ರಾಜ್ಯ ನೀತಿಯ ಅವಿಭಾಜ್ಯ ಅಂಗವೇ ಭಯೋತ್ಪಾದನೆಯಾಗಿದೆ.. ಅದು ಉಗ್ರರಿಗೆ ಧನಸಹಾಯ ಮಾಡುತ್ತೆ, ಶಸ್ತ್ರಾಸ್ತ್ರ ಕೊಟ್ಟ ಉಗ್ರರಿಗೆ ತರಬೇತಿ ನೀಡಿ ಭಾರತದ ವಿರುದ್ಧ ಸಂಚು ರೂಪಿಸುತ್ತಿದೆ ಎಂದಿದ್ದರು. ಅಲ್ಲದೇ ಭಾರತ ಕೇವಲ ತನ್ನ ನೆಲದಲ್ಲಿ ಮಾತ್ರ ಭಯೋತ್ಪಾದನೆಯನ್ನ ಮಟ್ಟ ಹಾಕಲ್ಲ. ಅವಶ್ಯಕತೆ ಬಿದ್ದರೆ ಪಾಕಿಸ್ತಾನದ ನೆಲದಲ್ಲಿ ಹೋಗಿ ಕಾರ್ಯಾಚರಣೆ ನಡೆಸಿ ಉಗ್ರರನ್ನ ಹೊಡೆದುರುಳಿಸುತ್ತೇವೆ ಎಂದು ಪಾಕ್ ಗೆ ಎಚ್ಚರಿಕೆ ನೀಡಿದ್ದರು.








