ಭಾರತದಲ್ಲಿ ಹೂಡಿಕೆ ಮಾಡಲು ಅಮೆರಿಕಾ ಕಂಪನಿಗಳಿಗೆ ಮುಕ್ತ ಆಹ್ವಾನ..!
ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ 3 ದಿನಗಳ ಅಮೆರಿಕಾ ಪ್ರವಾಸ ಕೈಗೊಂಡಿದ್ದು, ನಿನ್ನೆ ಶ್ವೇತಭವನದಲ್ಲಿ ಕಮಲಾ ಹ್ಯಾರಿಸ್ ಜೊತೆಗೆ ಚರ್ಚೆ ನಡೆಸಿದ್ದಾರೆ. ಇನ್ನ ಭೇಟಿ ಅಂತ್ಯದ ವೇಳೆಗೆ ಹಲವಾರು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದ್ದು, ಇದರಿಂದ ಅಮೆರಿಕಾ ಹಾಗೂ ಭಾರತದ ನಡುವಿನ ಸಂಬಂಧ ಮತ್ತಷ್ಟು ಬಲವಾಗಬಹುದು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಮೆರಿಕಾ ಕಂಪನಿಗಳ ಸಿಇಒಗಳು ಕೂಡ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಉದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಭಾರತದಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳ ಬಗ್ಗೆ ಅಮೆರಿಕದ ಪ್ರಮುಖ ಕಂಪನಿಗಳ ಸಿಇಒಗಳು, ಉದ್ಯಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಭಾರತದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳು ಸೃಷ್ಟಿಯಾಗಿವೆ ಎಂದಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ ತಿಳಿಸಿದ್ದಾರೆ.
ಈ ಬಗ್ಗೆ ಸಭೆ ಬಳಿಕ ಟ್ವೀಟ್ ಮಾಡಿರುವ ಮೋದಿ ಅವರು ಭಾರತ ಕೈಗೊಂಡಿರುವ ಸುಧಾರಣಾ ಕ್ರಮಗಳಿಂದ ಉಭಯ ದೇಶಗಳ ನಡುವಿನ ಆರ್ಥಿಕ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದ್ದು ಜನರಿಗೆ ಲಾಭವಾಗಲಿದೆ ಎಂಬ ವಿಶ್ವಾಸವನ್ನು ಸಿಇಒಗಳು ಉದ್ಯಮಿಗಳು ವ್ಯಕ್ತಪಡಿಸಿದರು ಎಂದು ತಿಳಿಸಿದ್ದಾರೆ.








