ಉಗ್ರರನ್ನು ಪೋಷಿಸುವ ಪಾಕಿಸ್ತಾನ ಸಂತ್ರಸ್ತರಂತೆ ನಟಿಸುವ ಕಪಟಿ ದೇಶ – ಭಾರತ
ಮತ್ತೆ ಕಾಶ್ಮೀರದ ವಿಚಾರ ಕೆದಕಿದ ಪಾಕಿಗಳಿಗೆ ಭಾರತ ತೀಕ್ಷ್ಣವಾಗಿಯೇ ಪ್ರತ್ಯುತ್ತರ ನೀಡಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಮಿಷನ್ ನ ಸಲಹೆಗಾರರಾದ ಡಾ. ಕಾಜಲ್ ಭಟ್ ಅವರು ಮಾತನಾಡಿ ಉಗ್ರರನ್ನ ಪೋಷಿಸುವ ಕಪಟಿ ಪಾಕಿಸ್ತಾನವು ಸಂತ್ರಸ್ತರಂತೆ ನಟಿಸುತ್ತದೆ ಎಂದು ಕಾಶ್ಮೀರದ ವಿಚಾರ ಎತ್ತಿದ ಪಾಕಿಸ್ತಾನಕ್ಕೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ಅಲ್ಲದೇ ಪಾಕಿಸ್ತಾನ ತನ್ನ ದೇಶದಲ್ಲಿರುವ ಹಿಂದು, ಕ್ರಿಶ್ಚಿಯನ್, ಸಿಖ್ ಮತ್ತು ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತರ ಒಕ್ಕಲೆಬ್ಬಿಸುವುದನ್ನು ಮೊದಲು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಭಯೋತ್ಪಾದನೆ ನಿವಾರಣೆಗೆ ಕ್ರಮಗಳು ಕುರಿತು ನಡೆದ 6ನೇ ಕಾನೂನು ಸಮಿತಿಯ ಸಭೆಯಲ್ಲಿ ಮಾತನಾಡಿದ ಕಾಜಲ್ ಭಟ್ ಎಲ್ಲ ವಿಭಾಗಗಳಲ್ಲೂ ಭಯೋತ್ಪಾದನೆಯ ವಿರುದ್ಧದ ಹೋರಾಟ ನಿರಂತರವಾಗಿ ನಡೆಯಬೇಕು ಎಂದು ಪ್ರತಿಪಾದಿಸಿದರು. ಅಲ್ಲದೇ ಪಾಕಿಸ್ತಾನವು ಕಾಶ್ಮೀರದ ಕುರಿತು ಮತ್ತೆ ಸುಳ್ಳುಗಳನ್ನು ಹೇಳಲು ಈ ವೇದಿಕೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದಕ್ಕೆ ನನಗೆ ಬೇಸರವಾಗಿದೆ ಎಂದು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.