ಶಬರಿ ಮಲೆ : ಮಕರವಿಳಕ್ಕು ಉತ್ಸವಕ್ಕೆ ಪ್ರತಿ ದಿನ ಕೇವಲ 25ಸಾವಿರ ಭಕ್ತರಿಗೆ ಮಾತ್ರ ಅವಕಾಶ
ಶಬರಿ ಮಲೆ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಈ ಬಾರಿಯ ಮಂಡಲ ಮಕರವಿಳಕ್ಕು ಉತ್ಸವಕ್ಕೆ ಪ್ರತಿ ದಿನ ಕೇವಲ 25ಸಾವಿರ ಭಕ್ತರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಬಗ್ಗೆ ಕೇರಳ ಸರ್ಕಾರದ ಉತ್ನತ ಮಟ್ಟದ ಸಭೆಯ ಬಳಿಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾಹಿತಿ ನೀಡಿದ್ದಾರೆ. ಇನ್ನೂ ಕೇರಳದಲ್ಲಿಯೇ ಕೊರೊನಾ ಹಾವಳಿ ಹೆಚ್ಚಾಗಿರುವ ಪರಿಣಾಮ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸದ್ಯಕ್ಕೆ 25 ಸಾವಿರ ಮಂದಿಗೆ ಒಂದು ದಿನದಲ್ಲಿ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಹೆಚ್ಚಿನ ಭಕ್ತರಿಗೆ ಅವಕಾಶ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು ಎಂದಿದ್ದಾರೆ ಪಿಣರಾಯಿ ವಿಜಯನ್ ಅವರು.
ಮಾರ್ಗಸೂಚಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನ ಪ್ರಕಟಿಸಲಾಗಿದೆ. ಇನ್ನೂ ಶಬರಿಮಲೆಗೆ 10 ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಭಕ್ತರಿಗೆ ಅವಕಾಶ ನೀಡಲಾಗಿದೆ. ಭಕ್ತರು ಆನ್‍ಲೈನ್ ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಮುಂಗಡವಾಗಿ ಪ್ರವೇಶಕ್ಕೆ ಕಾಯ್ದಿರಿಸಿ ಪ್ರತಿದಿನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೇ ಈ ಬಾರಿ ಭಕ್ತರು ಏರುಮಲೆ ಮತ್ತು ಪುಲ್ಮೇಡು ಸಾಂಪ್ರದಾಯಿಕ ಅರಣ್ಯ ಮಾರ್ಗಗಳ ಮೂಲಕ ಹೋಗಲು ಅನುಮತಿ ನಿರಾಕರಿಸಲಾಗಿದೆ. ಆದ್ರೆ ಪಂಪಾ ನದಿಯಲ್ಲಿ ಸ್ನಾನ ಮಾಡಲು ಭಕ್ತರಿಗೆ ಅವಕಾಶವಿದೆ. ಶಬರಿಮಲೆಯ ಸನ್ನಿಧಾನದಲ್ಲಿ ಯಾತ್ರಾರ್ಥಿಗಳಿಗೆ ಉಳಿಯಲು ಅವಕಾಶವಿಲ್ಲ. ಸನ್ನಿಧಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಕೋವಿಡ್-19 ಲಸಿಕೆ ಪಡೆದುಕೊಂಡಿರುವ ಅಥವಾ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು.








