“ಮ್ಯಾನ್ಮಾರ್ ನಿಂದ 37000 ಕ್ಕೂ ಹೆಚ್ಚು ಮಂದಿ ಭಾರತಕ್ಕೆ ಪಲಾಯನ”..!
ಮ್ಯಾನ್ಮಾರ್ ನಲ್ಲಿ ಮಿಲಿಟರಿ ಸರ್ಕಾರ ರಚನೆಯ ನಂತರ ಉದ್ಭವವಾಗಿರುವ ಬಿಕ್ಕಟ್ಟಿನಿಂದಾಗಿ ಸೇನಾ ಹಾಗೂ ನಾಗರಿಕರ ನಡುವಿನ ಸಂಘರ್ಷವು ಮುಂದುವರೆದಿದೆ. ಇತ್ತ ಆ ದೇಶದ ಲಕ್ಷಾಂತರ ಜನ ವಿವಿಧ ಗಡಿ ದೇಶಗಳಿಗೆ ಫಲಾಯನ ಮಾಡಿದ್ದಾರೆ. ಆದ್ರೆ ಅಧಿಕೃತ ವರದಿ ಪ್ರಕಾರ ಆ ದೇಶದಿಂದ ಸುಮಾರು 37000 ಕ್ಕೂ ಅಧಿಕ ಜನ ಪಲಾಯನ ಮಾಡಿದ್ದು ಅದ್ರಲ್ಲಿನ ಬಹುತೇಕರು ನಮ್ಮ ದೇಶಕ್ಕೆ ನುಗ್ಗಿರುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ದೇಶದ ವಾಯವ್ಯ ಭಾಗದಲ್ಲಿ ಮ್ಯಾನ್ಮಾರ್ ಮಿಲಿಟರಿ ಹಾಗೂ ಸ್ಥಳೀಯ ಪಾಪ್ಯುಲರ್ ಡಿಫೆನ್ಸ್ ಫೋರ್ಸ್ ನಡುವೆ ಇತ್ತೀಚೆಗೆ ಕದನ ಶುರುವಾಗಿದ್ದು, ಇದು ಹೆಚ್ಚಾಗುವ ಆತಂಕ ಇದೆ. ಇದರಿಂದಾಗಿ ಚಿನ್, ಮ್ಯಾಗ್ವೆ ಹಾಗೂ ಸಗಾಯಿಂಗ್ ರಾಜ್ಯಗಳಲ್ಲಿನ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರ ಸಹವಕ್ತಾರರಾದ ಫ್ಲಾರೆನ್ಸಿಯಾ ಸೊಟೊ ನಿನೊ ಹೇಳಿದ್ದಾರೆ.
ಇನ್ನೂ ಈ ಸಂಘರ್ಷದ ಪರಿಣಾಮವಾಗಿ ಜನರು ಮನೆಗಳನ್ನು ತೊರೆದು ಸುರಕ್ಷಿತ ತಾಣಗಳನ್ನು ಅರಸಿ ಓಡಿ ಹೋಗುತ್ತಿದ್ದಾರೆ. ಆಸ್ತಿಗಳಿಗೆ ಹಾನಿಯುಂಟಾಗಿದೆ. ಪಶ್ಚಿಮ ಚಿನ್ ರಾಜ್ಯದ ಥತ್ಲಾಂಗ್ ಪಟ್ಟಣದಲ್ಲಿ 160ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿರುವ ಆತಂಕಕಾರಿ ಘಟನೆ ನಡೆದಿದೆ ಎಂದು ಸಹ ಹೇಳಿದ್ದಾರೆ.