ಕಂಗನಾಗೆ ರೈತರಿಂದ ಘೇರಾವ್…. ಕೊಲೆ ಬೆದರಿಕೆ ಅಂದ ‘ಕ್ವೀನ್’..!
ಮುಂಬೈ : ಮುಂಬೈ : ಬಾಲಿವುಡ್ ನ ‘ಕ್ವೀನ್’ ಕಂಗನಾ ರಣೌತ್ ಸದಾ ಅವರಿವರ ವಿರುದ್ಧ ಕಿಡಿಕಾರೋದು , ಆರೋಪಗಳನ್ನ ಮಾಡೋ ಮೂಲಕವೇ ಕಾಂಟ್ರವರ್ಸಿಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಹಾಗೆಯೇ ಇತ್ತೀಚೆಗೆ ರೈತರನ್ನು ಭಯೋತ್ಪಾದಕರೆಂಬ ರೀತಿಯಲ್ಲಿ ಕಂಗನಾ ಪೋಸ್ಟ್ ಮಾಡಿದ್ದರು. ಇದು ರೈತರ ಕೆಂಗಣ್ಣಿಗೆ ಗುರಿಯಾಗಿತ್ತು.. ಹೀಗಾಗಿಯೇ ಕಂಗನಾ ಕಾರನ್ನ ರಸ್ತೆ ಮಧ್ಯದಲ್ಲೇ ತಡೆದಿದ್ದ ರೈತರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ ಘಟನೆ ಪಂಜಾಬ್‍ನ ಕಿರಾತ್‍ಪುರ ಸಾಹಿಬ್‍ನಲ್ಲಿ ನಡೆದಿದೆ.
ರದ್ದುಪಡಿಸಿದ ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ಧ ರೈತರು ಸುಮಾರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರು. ಕಂಗನಾ ರೈತರ ವಿರುದ್ಧ ಕಿಡಿಕಾರಿದ್ದರು. ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರು, ಖಲಿಸ್ಥಾನಿಗಳು ಮತ್ತು ಸಮಾಜ ವಿರೋಧಿಗಳು ಎಂದು ಟೀಕಿಸಿದ್ದರು.
ಈ ಹಿನ್ನೆಲೆಯಲ್ಲಿ ಕಂಗನಾ ಅವರು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಪಂಜಾಬ್‍ನಲ್ಲಿ ಹಾದು ಹೋಗುತ್ತಿದ್ದಾಗ ಪ್ರತಿಭಟನಾಕಾರರು ಧ್ವಜಗಳನ್ನು ಬೀಸುತ್ತಾ ಮತ್ತು ಘೋಷಣೆಗಳನ್ನು ಕೂಗುತ್ತಾ ಅವರ ಕಾರನ್ನು ತಡೆದರು. ನಟಿಯು ಕೆಲವು ಮಹಿಳಾ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ನಂತರ ಅಂತಿಮವಾಗಿ ಆ ಸ್ಥಳವನ್ನು ತೊರೆಯುವಲ್ಲಿ ಯಶಸ್ವಿಯಾದರು. ಘಟನೆ ಕುರಿತು ಕಂಗನಾ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ನನ್ನನ್ನು ಇಲ್ಲಿಯ ಗುಂಪೊಂದು ಸುತ್ತುವರಿದಿದ್ದು, ನನ್ನನ್ನು ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬರೆದುಕೊಂಡಿದ್ದಾರೆ.








