ಕುಲ್ಗಾಮ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಸೇನಾ ಎನ್ಕೌಂಟರ್- 6 ಉಗ್ರರು ಉಡೀಸ್
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಆರು ಭಯೋತ್ಪಾದಕರು ಹತರಾಗಿದ್ದಾರೆ. ಇವರೆಲ್ಲರೂ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದರು. ಇದುವರೆಗೆ 4 ಉಗ್ರರನ್ನು ಗುರುತಿಸಲಾಗಿದ್ದು, ಈ ಪೈಕಿ 2 ಪಾಕಿಸ್ತಾನಿ ಹಾಗೂ 2 ಸ್ಥಳೀಯರಿದ್ದಾರೆ.
ಗುಂಡಿನ ದಾಳಿಯಲ್ಲಿ ಮೂವರು ಸೇನಾ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಗಾಯಗೊಂಡಿದ್ದಾರೆ ಎಂದು ಕಾಶ್ಮೀರ ವಲಯದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ. ಚಿಕಿತ್ಸೆ ವೇಳೆ ಓರ್ವ ಯೋಧ ಸಾವನ್ನಪ್ಪಿದ್ದಾರೆ. ಉಳಿದವರ ಸ್ಥಿತಿ ಸ್ಥಿರವಾಗಿದೆ.
ವಿಜಯ್ ಕುಮಾರ್ ಪ್ರಕಾರ, ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ತಂಡವು ಕುಲ್ಗಾಮ್‌ನಲ್ಲಿ ಮಾಹಿತಿಯ ಮೇರೆಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ವೇಳೆ ಭದ್ರತಾ ಪಡೆಗಳನ್ನು ಸುತ್ತುವರಿದ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದರು. ಇಲ್ಲಿ ಮೂವರು ಉಗ್ರರನ್ನು ಯೋಧರು ಹತ್ಯೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಮತ್ತೊಬ್ಬ ಉಗ್ರ ಅಡಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಶನಿವಾರ, ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಶನಿವಾರದಂದು ಶೋಪಿಯಾನ್‌ನ ಚೌಗಮ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಶುಕ್ರವಾರವೂ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿತ್ತು. ಈ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ 36 ಗಂಟೆಗಳಲ್ಲಿ 5 ಉಗ್ರರನ್ನು ಹತ್ಯೆ ಮಾಡಲಾಗಿದೆ.
ಶೋಪಿಯಾನ್‌ನಲ್ಲಿ ಹತರಾದ ಇಬ್ಬರೂ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾದೊಂದಿಗೆ ಸಂಬಂಧ ಹೊಂದಿದ್ದರು. ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಪಿಯಾನ್‌ನ ಚೌಗಮ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿತ್ತು. ಇದರ ನಂತರ, ಸೈನಿಕರು ಪ್ರದೇಶವನ್ನು ಸುತ್ತುವರೆದರು ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.








