ಉಡುಪಿಯಲ್ಲಿ ಭುಗಿಲೆದ್ದ ಹಿಜಾಬ್ – ಕೇಸರಿ ಶಾಲು ವಿವಾದ Saaksha Tv
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ಹಿಜಾಬ್ ವಿವಾದ ಹೈ ಕೋರ್ಟ್ ಮೆಟ್ಟಿಲೇರಿದೆ. ಆದರೆ ಈಗ ಜಿಲ್ಲೆಯ ಕುಂದಾಪುರ ತಾಲೂಕಿನ ಎರಡು ಕಾಲೇಜುಗಳಲ್ಲಿ ಈ ವಿವಾದ ತಾರಕ್ಕೇರುತ್ತಿದೆ.
ಉಡಪಿ ಜಿಲ್ಲೆಯ ಕುಂದಾಪುರದ ಸರಕಾರಿ ಪಿಯು ಕಾಲೇಜಿಗೆ ಪ್ರತಿದಿನ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಿದ್ದರು. ಅದೇ ರೀತಿ ಇಂದು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಆದರೆ ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟ್ ಬಳಿ ತಡೆದಿದ್ದಾರೆ. ಕಾಲೇಜಿನ ಒಳಗಡೆ ಬಾರದಂತೆ ಸೂಚನೆ ನೀಡಿದ್ದಾರೆ. ಆಗ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರ ನಡುವೆ ಮಾತಿನ ಚಕಮಕಿ ನಡೆದಿದೆ.
ಅಲ್ಲದೇ ಕುಂದಾಪುರ ನಗರದ ಖಾಸಗಿ ಭಂಡಾರ್ಕಾರ್ಸ್ ಕಾಲೇಜಿಗೆ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ. ಇದನ್ನು ಕಂಡ ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳು ಕಾಲೇಜು ಪ್ರವೇಶಿಸದಂತೆ ತಡೆದಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ ಹೊರಗಡೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಸದ್ಯ ಎರಡೂ ಕಾಲೇಜುಗಳಲ್ಲಿ ಉದ್ವಿಗ್ನತೆ ತಲೆದೋರಿದೆ.








