ಮದರಸಾ ಶಿಕ್ಷಣದಿಂದಾಗಿ ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣ ಪದ್ಧತಿಯಿಂದ ದೂರ ಉಳಿಯಬಾರದು : ಬಿ,ಸಿ ನಾಗೇಶ
ಕಾರವಾರ : ಮದರಸಾಕ್ಕೆ ಸೇರುವವರ ಮಕ್ಕಳ ಸಂಖ್ಯೆ ಕಡಿಮೆಯಾಗಿ ನಮ್ಮ ಶಾಲೆಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಇವತ್ತಿನ ಪ್ರಪಂಚದಲ್ಲಿ ಬದುಕುವುದಾದರೇ ಈ ಶಿಕ್ಷಣ ಪದ್ಧತಿ ಬೇಕು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
ಕುಮಟಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮದರಸಾ ಶಿಕ್ಷಣದಿಂದಾಗಿ ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣ ಪದ್ಧತಿಯಿಂದ ದೂರ ಉಳಿಯಬಾರದು, ಹೀಗಾಗಿ ಮದರಸಾಗಳನ್ನು ಶಿಕ್ಷಣ ಪದ್ಧತಿಯಲ್ಲಿ ತರುವ ಪ್ರಯತ್ನ ಮಾಡುತ್ತೇವೆ. ಅವರು ಸಹ ನಮ್ಮ ಎಲ್ಲಾ ಮಕ್ಕಳಂತೆ ಈ ಶಿಕ್ಷಣ ಪದ್ಧತಿಗೆ ಬರಬೇಕು ಎನ್ನುವ ಕಾರಣದಿಂದ ಮುಂದಿನ ದಿನದಲ್ಲಿ ಈ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ತಿಳಿಸಿದರು.
ಹಿಜಾಬ್ ಸಂಭಂದ ಮಕ್ಕಳು ಶಾಲೆಗೆ ಬಾರದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು ಶಾಲೆಗೆ ಬರಲೇಬೇಕು ಎಂದು ಒತ್ತಾಯಿಸಿ ಅವರ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಶೇ.99.9ರಷ್ಟು ಆ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಒಂದು ಪರಸೆಂಟ್ ಮಾತ್ರ ಬರುತ್ತಿಲ್ಲ. ಅವರನ್ನು ಶಾಲೆಗೆ ಕರೆಸುವಂತಹ ಪ್ರಯತ್ನ ಮಾಡುತ್ತೇವೆ. ಆದರೆ ಎಳೆದುಕೊಂಡು ಬರುವ ಪ್ರಯತ್ನ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಹಾಗೇ ಎನ್‍ಇಪಿ ಸಂಭಂದ ಪಾಲಕರು ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. 20 ಸಾವಿರ ಶಾಲೆಯಲ್ಲಿ ಮಾತ್ರ ಪ್ರಾರಂಭ ಮಾಡುತ್ತಿದ್ದೇವೆ. ಮಿಕ್ಕ ಶಾಲೆಯಲ್ಲಿ ಈಗ ಹೇಗೆ ನಡೆಯುತ್ತದೆಯೋ ಹಾಗೆಯೇ ನಡಿಯುತ್ತದೆ. ಸಂಖ್ಯೆ ಮತ್ತು ಸಾಕ್ಷರತೆಗೆ ಹೆಚ್ಚು ಒತ್ತನ್ನು ಕೊಡುತ್ತಿದ್ದೇವೆ. ನಮ್ಮಲ್ಲಿ 48 ಸಾವಿರ ಶಾಲೆಗಳಿದ್ದರೂ ಮಕ್ಕಳ ಸಂಖ್ಯೆ ಕಡಿಮೆ ಇದೆ. ಎಲ್ಲಿ ಮಕ್ಕಳು ಹೆಚ್ಚು ಇರುತ್ತಾರೋ ಅಲ್ಲಿ ಪ್ರಾರಂಭ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಅಲ್ಲದೇ ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಕೊರತೆ ಇದೆ. ಇದು ಎಲ್ಲರಿಗೂ ಅರಿವಾಗಿದೆ. ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ನೈತಿಕ ಶಿಕ್ಷಣದ ತರಗತಿಯನ್ನು ಮಾಡುತ್ತೇವೆ. ನೈತಿಕ ಶಿಕ್ಷಣದಲ್ಲಿ ಏನೇನು ಇರಬೇಕು ಎಂದು ಶಿಕ್ಷಣ ತಜ್ಞರ ಸಲಹೆ ಪಡೆದು ಮಾಡುತ್ತೇವೆ. ಭಗವದ್ಗೀತೆ ಧಾರ್ಮಿಕ ಅಲ್ಲ ಎಂದು ಹೇಳಿದ್ದಾರೆ.








