ಬೆಂಗಳೂರಿನಲ್ಲಿ ಭಾರಿ ಮಳೆ | ತೇಲಿ ಬಂದ ವಾಹನಗಳು
ಬೆಂಗಳೂರು: ನಿನ್ನೆ (ಗುರುವಾರ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಮನೆಗಳಿ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿತ್ತು.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಕಳೆದ ಎರಡು ದಿನಗಳಿಂದ ನಗರದಲ್ಲಿ ವರುಣನ ಆರ್ಭಟ ಜೋರಾಗಿದೆ. ಗುರುವಾರ ಸಂಜೆ 8 ಗಂಟೆಯಿಂದ ಪ್ರಾರಂಭವಾದ ಮಳೆ ತಡರಾತ್ರಿವರೆಗೂ ಬಿಟ್ಟು ಬಿಡದೆ ಸುರಿದಿದೆ. ಗಾಳಿ, ಮಳೆಗೆ ಹಲವು ನಗರಗಳಲ್ಲಿ ಮರಗಳು ಧರೆಗುರುಳಿವೆ.
ಇನ್ನೂ ನಗರದ ವಿಜಯನಗರ, ಬಸವೇಶ್ವರ ನಗರ, ಮಲ್ಲೇಶ್ವರ, ಶಾಂತಿನಗರ, ಕೋರಮಂಗಲ, ಇಂದಿರಾ ನಗರ, ಮೆಜೆಸ್ಟಿಕ್, ಯಶವಂತಪುರ, ಜಾಲಹಳ್ಳಿ, ಪೀಣ್ಯಾ, ದಾಸರಹಳ್ಳಿ, ಸುಂಕದಕಟ್ಟೆ ಸೇರಿದಂತೆ ರಾಜಧಾನಿಯ ಬಹುತೇಕ ಕಡೆ ವರುಣನ ಆರ್ಭಟ ಜೋರಾಗಿತ್ತು.
ರಾಜಧಾನಿಯಲ್ಲಿ ಉಂಟಾದ ಮಳೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದ್ದು ಸಿಲಿಕಾನ್ ಸಿಟಿಯ ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ ಭಾರಿ ಮಳೆಗೆ ಚರಂಡಿ ಹೊರಗಡೆ ಬಂದು ಕಾರುಗಳು ದ್ವಿಚಕ್ರ ವಾಹನಗಳು ಕೊಚ್ಚಿ ಹೋಗಿವೆ.
ಕಾಮಾಕ್ಯ ಬಡಾವಣೆಯಲ್ಲಿ ನೀರಿನಲ್ಲಿ ಕಾರು ಬೈಕ್ಗಳು ರಸ್ತೆಯಲ್ಲಿ, ತಗ್ಗು ಗುಂಡಿಗಳಲ್ಲಿ ಬಂದು ನಿಂತಿವೆ. ಕಾರಿನ ಮೇಲೆ ಮತ್ತೊಂದು ಕಾರು ಬಂದು ನಿಂತಿರುವುದು ಸಹ ಕಂಡುಬಂದಿದೆ. ಒಟ್ಟಿನಲ್ಲಿ ವಾಹನಗಳಿಗೆ ತಡರಾತ್ರಿಯ ಮಳೆಯಿಂದ ಸಾಕಷ್ಟು ಹಾನಿಯಾಗಿದೆ.