ಕೈ ತೊರೆದ “ಹಾರ್ದಿಕ್ ಪಟೇಲ್” ಕಮಲ ಹಿಡಿಯುವುದು ಪಕ್ಕಾ…
ಗುಜರಾತ್ ಕಾಂಗ್ರೆಸ್ ನ ಮಾಜಿ ನಾಯಕ ಹಾರ್ದಿಕ್ ಪಟೇಲ್ ಭಾರತೀಯ ಜನತಾ ಪಕ್ಷ ಸೇರುವ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಜೊತೆಗಿನ ಸಂವಾದದಲ್ಲಿ ಹಾರ್ದಿಕ್ ಪಟೇಲ್ ಜೂನ್ 2 ರಂದು ಬಿಜೆಪಿ ಸೇರುವುದಾಗಿ ಹೇಳಿದ್ದಾರೆ. ಪಟೇಲ್ ಮೇ 18 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನವೇ ಅವರ ಈ ನಡೆ ಕಾಂಗ್ರೆಸ್ಗೆ ದೊಡ್ಡ ಹಿನ್ನಡೆ ಎಂದೇ ಪರಿಗಣಿಸಲಾಗುತ್ತಿದೆ.
ಕಾಂಗ್ರೆಸ್ಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಹಾರ್ದಿಕ್ ಪಟೇಲ್ ಪಕ್ಷದ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ರಾಜೀನಾಮೆ ಸಲ್ಲಿಸಿದ್ದಾರೆ. ಈ ಪತ್ರದಲ್ಲಿ ಪಕ್ಷದ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದಾರೆ. ಪಟೇಲ್ 2019 ರಲ್ಲಿ ಕಾಂಗ್ರೆಸ್ ಸೇರಿದ್ದರು. ಅವರನ್ನು 11 ಜುಲೈ 2020 ರಂದು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಆದರೆ, 2022ರ ವೇಳೆಗೆ ಪಕ್ಷದ ಬಗ್ಗೆ ಭ್ರಮನಿರಸನಗೊಂಡು ರಾಜೀನಾಮೆ ನೀಡಿದರು.
ರಾಜ್ಯಾಧ್ಯಕ್ಷರಿಂದ ಸದಸ್ಯತ್ವ
ಜೂನ್ 2 ರಂದು ಹಾರ್ದಿಕ್ ಪಟೇಲ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ವಕ್ತಾರ ಯಜ್ಞೇಶ್ ದವೆ ತಿಳಿಸಿದ್ದಾರೆ. ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಸಮ್ಮುಖದಲ್ಲಿ ಅವರು ಬಿಜೆಪಿ ಸೇರಲಿದ್ದಾರೆ. ಕಳೆದ ಹಲವು ದಿನಗಳಿಂದ ಹಾರ್ದಿಕ್ ಪಟೇಲ್ ಬಿಜೆಪಿ ಸೇರಬಹುದು ಎಂಬ ಊಹಾಪೋಹಗಳಿದ್ದವು.








