ಹೊಸದಿಲ್ಲಿ, ಮೇ 30: ಗೂಗಲ್ ಕಂಪನಿ ಜುಲೈ 6 ರಿಂದ ಹಂತ ಹಂತವಾಗಿ ತನ್ನ ಸಂಸ್ಥೆಗಳನ್ನು ತೆರೆಯಲಾಗುವುದು ಎಂದು ಘೋಷಿಸಿದೆ. ಅಷ್ಟೇ ಅಲ್ಲ ತನ್ನ ಉದ್ಯೋಗಿಗಳು ಮನೆಯಿಂದಲೇ ಕರ್ತವ್ಯ ನಿರ್ವಹಿಸಬೇಕಾದ ಹಿನ್ನಲೆಯಲ್ಲಿ ಅವರ ಅಗತ್ಯ ವೆಚ್ಚಗಳು ಮತ್ತು ಕಚೇರಿ ಪೀಠೋಪಕರಣಗಳಿಗಾಗಿ ಪ್ರತಿ ಉದ್ಯೋಗಿಗೆ ತಲಾ $ 1000 (ಭಾರತದ ರೂಪಾಯಿಗಳಲ್ಲಿ 75,000) ನೀಡಲಿದೆ.
ಇದಕ್ಕಿಂತ ಮೊದಲು ಜೂನ್ 1ನೇ ತಾರೀಕಿನವರೆಗೆ ಮಾತ್ರ ವರ್ಕ್ ಫ್ರಮ್ ಹೋಮ್ ನಿಯಮ ರೂಪಿಸಲಾಗಿದೆ ಎಂದು ಗೂಗಲ್ ಘೋಷಿಸಿದ್ದು, ಇದೀಗ ವಿಸ್ತರಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಘೋಷಣೆ ಮಾಡಲಾಗಿದೆ.
ಆಲ್ಫಾಬೆಟ್ ಹಾಗೂ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಈ ಬಗ್ಗೆ ಮಾತನಾಡಿದ್ದು, ಜುಲೈ 6ನೇ ತಾರೀಕಿನಿಂದ ಹೆಚ್ಚಿನ ನಗರಗಳಲ್ಲಿ ಸಂಸ್ಥೆಗಳು ಕಾರ್ಯಚರಣೆ ಪುನರಾರಂಭಿಸಲಿದ್ದು, ಪರಿಸ್ಥಿತಿ ಅವಕಾಶ ಮಾಡಿಕೊಟ್ಟರೆ ಸೆಪ್ಟೆಂಬರ್ ಹೊತ್ತಿಗೆ ಒಟ್ಟು ಸಾಮರ್ಥ್ಯದ ಶೇಕಡಾ 30ರಷ್ಟು ಮಂದಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಗೂಗಲ್ ಉದ್ಯೋಗಿಗಳು ಈ ವರ್ಷದ ಇನ್ನೂ ಬಹಳ ಸಮಯವನ್ನು ಮನೆಗಳಿಂದ ಕೆಲಸ ಮಾಡಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ಉದ್ಯೋಗಿಗಳ ಅಗತ್ಯ ವೆಚ್ಚಗಳು ಮತ್ತು ಪೀಠೋಪಕರಣಗಳಿಗಾಗಿ ಪ್ರತಿಯೊಬ್ಬ ಉದ್ಯೋಗಿಗೂ 1,000 ಅಮೆರಿಕನ್ ಡಾಲರ್ ಅಥವಾ ಆಯಾ ದೇಶದಲ್ಲಿ ಆ ಮೊತ್ತಕ್ಕೆ ಸರಿ ಸಮನಾಗಿ ಭತ್ಯೆ ನೀಡಲಾಗುವುದು ಎಂದು ಸುಂದರ್ ಪಿಚೈ ಹೇಳಿದ್ದಾರೆ.
ಈ ವರ್ಷ ಕಛೇರಿಗೆ ಬಂದು ಕಾರ್ಯ ನಿರ್ವಹಿಸಬೇಕು ಎನ್ನುವ ಗೂಗಲ್ ಉದ್ಯೋಗಿಗಳ ಸಂಖ್ಯೆಯ ಅಗತ್ಯ ಕಡಿಮೆ ಇದ್ದು, ಯಾವ ಉದ್ಯೋಗಿ ಕಚೇರಿಗೆ ಬರಬೇಕು ಎನ್ನುವುದನ್ನು ಆಯಾ ಮ್ಯಾನೇಜರ್ ಜೂನ್ 10ನೇ ತಾರೀಕಿನೊಳಗೆ ತಿಳಿಸುತ್ತಾರೆ ಎಂದು ಅವರು ಹೇಳಿದರು. ಇತರ ಉದ್ಯೋಗಿಗಳು ಕಚೇರಿಗೆ ಬರುವ ವಿಚಾರ ಅವರ ಆಯ್ಕೆಗೆ ಬಿಟ್ಟಿದ್ದು, ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಸಾಧ್ಯವಿದ್ದರೆ ಅದನ್ನೇ ಮುಂದುವರಿಸಿ ಎಂದು ಸಲಹೆ ಮಾಡುತ್ತೇವೆ ಎಂದು ಪಿಚೈ ಹೇಳಿದ್ದಾರೆ.