Bengaluru Traffic Police: ಮಳೆಯಿಂದ ರಕ್ಷಣೆ ಪಡೆಯಲು ಅಂಡರ್ ಪಾಸ್ ನಲ್ಲಿ ವಾಹನ ನಿಲ್ಲಿಸಿದರೆ ದಂಡ
ಮಳೆ ಬರುವ ಸಮಯದಲ್ಲಿ ಅಂಡರ್ಪಾಸ್ನಲ್ಲಿ ವಾಹನ ನಿಲ್ಲಿಸಿಕೊಂಡು ನಿಂತರೆ ದಂಡ ವಿಧಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ, ಇದು ಅಸುರಕ್ಷಿತವಾಗಿದ್ದು ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಳೆ ಬರುವ ಸಂದರ್ಭದಲ್ಲಿ ಬ್ರಿಡ್ಜ್ ಗಳ ಕೆಳಗೆ ಮತ್ತು ಅಂಡರ್ ಪಾಸ್ ಗಳಲ್ಲಿ ವಾಹನ ನಿಲ್ಲಿಸಿದರೆ ಮೊದಲ ಬಾರಿಗೆ 500 ರೂ. ದಂಡವನ್ನು ವಿಧಿಸಲಾಗುತ್ತದೆ ಮತ್ತು ಎರಡನೇ ಬಾರಿಗೆ 1,000 ರೂ ದಂಡ ವಿಧಿಸಲು ಪೊಲೀಸರು ಮುಂದಾಗಿದ್ದಾರೆ. ಅಂಡರ್ ಪಾಸ್ ನಲ್ಲಿ, ಬ್ರಿಡ್ಜ್ ಕೆಳಗೆ ವಾಹನ ನಿಲ್ಲಿಸುವ ಬದಲು ಹತ್ತಿರದ ಅಂಗಡಿಗಳಲ್ಲಿ ಆಶ್ರಯ ಪಡೆಯುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
ನಗರದಲ್ಲಿ ಕಳೆದ 26 ದಿನಗಳಿಂದ ಮಳೆಯಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಅಂಡರ್‌ಪಾಸ್‌ಗಳಲ್ಲಿ ವಾಹನ ನಿಲ್ಲಿಸಿಕೊಂಡು ನಿಂತಿರುವುದನ್ನು ನೋಡಿದ್ದೇವೆ. ಅಂತಹ 46 ಅಂಡರ್‌ಪಾಸ್‌ಗಳನ್ನು ಗುರುತಿಸಿರುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.
ಮಳೆ ಬಂತೆಂದು ಅಂಡರ್ಪಾಸ್ನಲ್ಲಿ ವಾಹನ ನಿಲ್ಲಿಸಿಸಲಾಗುತ್ತಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಹೆವಿ ವೆಹಿಕಲ್ಸ್ ಪಾಸ್ ಆದಾಗ ಅಪಘಾತವಾಗುತ್ತದೆ. ಹೀಗಾಗಿ ಇನ್ಮುಂದೆ ಅಂಡರ್ಪಾಸ್ನಲ್ಲಿ ವಾಹನ ನಿಲ್ಲಿಸದಂತೆ ಸೂಚನೆ ನೀಡಲಾಗಿದೆ. ಕೆಳಸೇತುವೆಯಲ್ಲಿ ಗಾಡಿ ನಿಲ್ಲಿಸಿ ಟ್ರಾಫಿಕ್ಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.








