ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ದಸರಾ ವೈಭವ
ವಿದ್ಯಾ ಕೇಂದ್ರದಲ್ಲಿ ದಸರಾ ಬೊಂಬೆ ಪ್ರದರ್ಶನ
ನಾಡಹಬ್ಬವನ್ನು ಉಳಿಸುವುದು ನಮ್ಮ ಜವಾಬ್ದಾರಿ
ಬೆಂಗಳೂರು : ನವರಾತ್ರಿ, ದಸರಾ ಎಂದರೇ ನೆನಪಿಗೆ ಬರುವುದು ಜಂಬೂ ಸವಾರಿ ಹಾಗೂ ಕುಸ್ತಿಗಳು. ಅದೇ ರೀತಿ ಮನೆಯಲ್ಲಿ ಬೊಂಬೆಗಳ ಪ್ರದರ್ಶನ ಮಾಡುವುದು.
ಕೇವಲ ಮನೆಗಳಿಗೆ ಮಾತ್ರ ಸೀಮಿತವಾಗಿದ್ದ ಬೊಂಬೆ ಪ್ರದರ್ಶನ ಶಾಲೆಗಳಿಗೂ ವ್ಯಾಪಿಸಿದೆ.
ಬೆಂಗಳೂರಿನ ವಿದ್ಯಾಮಾನ್ಯ ನಗರದ ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ದಸರಾ ಹಬ್ಬದ ಸೌಂದರ್ಯ ಕಳೆಕಟ್ಟಿದೆ.
ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರದಲ್ಲಿ ಭಾರತೀಯ ಸಂಸ್ಕೃತಿ, ಆಚರಣೆ ಹಾಗೂ ಮೌಲ್ಯಗಳ ಅನಾವರಣಗೊಂಡಿದೆ.
ಆಡಳಿತ ಮಂಡಳಿ ಸಹಯೋಗದೊಂದಿಗೆ ಬೋಧಕ ಸಿಬ್ಬಂದಿ ವತಿಯಿಂದ ಶ್ರೀ ರಾಮಾಯಣ ವೈಭವ, ಪಟ್ಟದ ಗೊಂಬೆ, ಶ್ರೀಕೃಷ್ಣ ಲೀಲಾ, ಪುರಿ ಪರಮಪುರುಷ ಜಗನ್ನಾಥ ವೈಭವ, ಭಾರತೀಯ ಬುಡಕಟ್ಟು ಹಾಗೂ ಹಳ್ಳಿಗಳ ಕುರಿತಾದ ಪ್ರದರ್ಶನ ಮತ್ತು ಮೈಸೂರು ದಸರಾ ಮೆರವಣಿಗೆ ಗೊಂಬೆಗಳ ಪ್ರದರ್ಶನ ಮಾಡಲಾಗಿದೆ.
ಸಂಪೂರ್ಣ ರಾಮಾಯಣ ( ರಾಮನ ಹುಟ್ಟು, ವನವಾಸ, ಶ್ರೀರಾಮನ ಪಟ್ಟಾಭಿಷೇಕ, ಲವಕುಶ ಜನನ, ಲವಕುಶ ಪಟ್ಟಾಭೀಷೇಕ) ದ ಗೊಂಬೆಗಳು, ಮೈಸೂರ ದಸರಾ ಜಂಬೂ ಸವಾರಿ ಗೊಂಬೆಗಳು, ಶ್ರೀ ಕೃಷ್ಣ ಲೀಲಾ, ನವದುರ್ಗೆಯರು, ಮದುವೆ ಮಂಟಪ, ಚೆನ್ನಪಟ್ಟಣದ ಬೊಂಬೆಗಳು, ಪಟ್ಟದ ಬೊಂಬೆಗಳು, ತೋಪುಗಳು, ಕಾಮದೇನು, ಹಳ್ಳಿಗಾಡು ಸೇರಿದಂತೆ ಅನೇಕ ಪ್ರಕಾರದ ಬೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವುದು ನೋಡುಗರನ್ನು ಆಕರ್ಷಿಸುತ್ತಿವೆ.

ಕಳೆದ ಏಳು ವರ್ಷಗಳಿಂದ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ದಸರಾ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಈ ಬಾರಿ ಸಂಪೂರ್ಣ ರಾಮಾಯಣ, ಕೃಷ್ಣ ಲೀಲೆ, ಮಹಾಭಾರತದ ಸನ್ನಿವೇಷಗಳು, ಪೂರಿ ಜಗನ್ನಾಥ ರಥಯಾತ್ರೆ, ಮೈಸೂರು ದಸರಾ ಪ್ರದರ್ಶನ ಮಾಡುತ್ತಿದ್ದೇವೆ.
ನಮ್ಮ ಆಡಳಿತ ಮಂಡಳಿ ನಮಗೆ ತುಂಬಾ ಬೆಂಬಲವಾಗಿದೆ. ಕಳೆದ 20 ದಿನಗಳಿಂದ ಈ ಕೆಲಸ ಮಾಡಿದ್ದು, ನಾವು ಅಂದುಕೊಂಡಂತೆ ಬೊಂಬೆಗಳ ಪ್ರದರ್ಶನ ಮೂಡಿಬಂದಿದೆ.
ಎಲ್ಲರೂ ಬನ್ನಿ ನಮ್ಮ ನಾಡಹಬ್ಬವನ್ನು ಉಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ಎಲ್ಲರೂ ಒಟ್ಟಾಗಿ ದಸರಾವನ್ನು ಸಂಭ್ರಮಿಸೋಣ ಎಂದು ಶ್ರೀ ವಿದ್ಯಾಮಾನ್ಯ ವಿದ್ಯಾ ಕೇಂದ್ರ ಪ್ರಾಂಶುಪಾಲೆ ಶರದಾ ಅವರು ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ ಈ ಬೊಂಬೆ ಪ್ರದರ್ಶನ ದಿನಾಂಕ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರವರೆಗೂ ನಡೆಯಲಿದೆ. ಬೆಳಗ್ಗೆ 9.30 ರಿಂದ ಸಂಜೆ 6.30 ರವರೆಗೂ ಬೊಂಬೆ ಪ್ರದರ್ಶನ ಇರಲಿದೆ.









