ಹೊಸದಿಲ್ಲಿ, ಜೂನ್ 7: ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್, ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆಗಳಿಗೆ ಕೇಂದ್ರಬಿಂದುವಾಗಿದ್ದು, ಪ್ರಪಂಚಕ್ಕೆಲ್ಲಾ ಉಗ್ರವಾದವನ್ನು ಹಂಚಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ ವರ್ಷ ಪಾಕ್ 30- 40 ಸಾವಿರ ಉಗ್ರರಿಗೆ ಆಶ್ರಯ ನೀಡಿದೆ ಎಂದು ಪ್ರಧಾನಿ ಇಮ್ರಾನ್‌ಖಾನ್ ತಪ್ಪೊಪ್ಪಿಕೊಂಡಿದ್ದರು. ಈ ಹೇಳಿಕೆಯನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ನೆನಪಿಸಿಕೊಳ್ಳಬೇಕು ಎಂದು ಅವರು ಟೀಕಿಸಿದರು.
ವಿಶ್ವಸಂಸ್ಥೆ ಮತ್ತು ವಿಶ್ವ ಸಮುದಾಯಕ್ಕೂ ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆಗಳ ಹಾಟ್‌ಸ್ಪಾಟ್ ಎಂದು ಗೊತ್ತಿದೆ. ಇದನ್ನು ಪಾಕಿಸ್ತಾನ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದ ಅನುರಾಗ್ ಶ್ರೀವಾಸ್ತವ್, ವಾಷಿಂಗ್ಟನ್ ನಲ್ಲಿ ನಡೆದ ಸಭೆಯಲ್ಲಿ ಪಾಕ್ 40 ಸಾವಿರ ಮಂದಿ ಉಗ್ರರಿಗೆ ಆಶ್ರಯ ನೀಡಿದ್ದರ ಬಗ್ಗೆ ಇಮ್ರಾನ್ ಖಾನ್, ತಪ್ಪೊಪ್ಪಿಕೊಂಡಿದ್ದನ್ನು ಮರೆಯಬಾರದು ಎಂದು ಹೇಳಿದ್ದಾರೆ.








