ಬೆಂಗಳೂರು : ಹೃದಯಾಘಾತದಿಂದ ನಿಧನ ಹೊಂದಿದ ಕನ್ನಡ ಸಿನಿಮಾ ರಂಗದ ಯುವ ಸಾಮ್ರಾಟ ನಟ ಚಿರಂಜೀವಿ ಸರ್ಜಾ ಅವರ ಅಂತಿಮ ಸಂಸ್ಕಾರಕ್ಕೆ ಕನಕಪುರ ರಸ್ತೆಯಲ್ಲಿರುವ ನೆಲಗುಳಿಯ ಧ್ರುವ ಸರ್ಜಾ ಅವರ ಬೃಂದಾವನ ಫಾರ್ಮ್ ಹೌಸ್ನಲ್ಲಿ ಸಿದ್ಧತೆಗಳು ನಡೆದಿದೆ. ಇದಕ್ಕಾಗಿ ಫಾರ್ಮ್ ಹೌಸ್ನ ಹೃದಯಭಾಗದಲ್ಲಿ ಜಾಗ ಗುರುತಿಸಲಾಗಿದೆ. ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡಲಾಗುತ್ತಿದೆ.
ಧ್ರುವ ಸರ್ಜಾ ಕೆಲ ವರ್ಷಗಳಿಂದಷ್ಟೇ ಬೃಂದಾವನ ಫಾರ್ಮ್ ಹೌಸ್ ಖರೀದಿಸಿದ್ದರು. ತಮ್ಮನ ಈ ಕೆಲಸಕ್ಕೆ ಚಿರು ಸಹ ಮೆಚ್ಚುಗೆ ವ್ಯಕ್ತಪಡಿಸಿದರು. ಆ ಫಾರ್ಮ್ಹೌಸ್ನಲ್ಲೇ ಒಂದಷ್ಟು ದಿನಗಳನ್ನು ಕಳೆದಿದ್ದರು. ಸಿನಿಮಾ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಕುಟುಂಬದೊಟ್ಟಿಗೆ ತೋಟದಲ್ಲಿಯೇ ಕಾಲಕಳೆಯುತ್ತಿದ್ದರು. ಇದೀಗ ಅದೇ ಇಷ್ಟದ ಫಾರ್ಮ್ ಹೌಸ್ನಲ್ಲೇ ಶಾಶ್ವತವಾಗಿ ಮಲಗುತ್ತಿದ್ದಾರೆ.
ಬಸವನಗುಡಿಯ ಮನೆಯಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ರಾತ್ರಿಯಿಂದಲೂ ಅಭಿಮಾನಿಗಳು, ಚಿತ್ರರಂಗದ ಗೆಳಯರು, ಸ್ಯಾಂಡಲ್ ವುಡ್ ನ ಹಿರಿಯರು, ಕುಟುಂಬದ ಗೆಳಯರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಇಂದು ಮಧ್ಯಾಹ್ನ ಒಂದು ಗಂಟೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಾದ ಬಳಿಕ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಫಾರ್ಮ್ ಹೌಸ್ ಗೆ ಸಾಗಿಸಲಿದ್ದಾರೆ. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಅಂತ್ಯ ಸಂಸ್ಕಾರ ನಡೆಯುತ್ತದೆ ಎಂದು ಮೂಲಗಳು ತಿಳಿಸಿವೆ.








