ಇಂದು ಚಿರು ಸರ್ಜಾ ಅವರ ಮೂರನೇ ದಿನದ ಹಾಲು ತುಪ್ಪ ಕಾರ್ಯ

ಬೆಂಗಳೂರು, ಜೂನ್ 9: ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಚಿರಂಜೀವಿ ಸರ್ಜಾ ಅವರ ಮೂರನೇ ದಿನದ ಹಾಲು ತುಪ್ಪ ಕಾರ್ಯ ಇಂದು ನಡೆಯುತ್ತಿದೆ. ತಮ್ಮ 39 ರ ವಯಸ್ಸಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಸಹೋದರ ಧ್ರುವ ಸರ್ಜಾ ಫಾರ್ಮ್ ಹೌಸ್‍ನಲ್ಲಿ ನಿನ್ನೆ ನಡೆಯಿತು. ಅದರ ಮುಂದುವರೆದ ಭಾಗವಾಗಿ ಚಿರು ಸರ್ಜಾ ಸಮಾಧಿ ಬಳಿ ಇಂದು ಪುರೋಹಿತರಿಂದ ಹಾಲು ತುಪ್ಪ ಕಾರ್ಯ ನಡೆಯುತ್ತಿದೆ. ಅಂತ್ಯಕ್ರಿಯೆ ವಿಧಿವಿಧಾನ ನಡೆಸಿಕೊಟ್ಟ ಮೋಹನ್ ಪುರೋಹಿತರಿಂದ ಚಿರು ಸರ್ಜಾರ ಹಾಲು ತುಪ್ಪ ಕಾರ್ಯ ನಡೆಯುತ್ತಿದೆ.

ಚಿರಂಜೀವಿ ಸರ್ಜಾ ಅಂತ್ಯಕ್ರಿಯೆಯಲ್ಲಿ ಅವರನ್ನು ನೆನಪಿಸಿಕೊಂಡು ಸರ್ಜಾ ಕುಟುಂಬ ಹಾಗೂ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದ ದೃಶ್ಯ ಎಂಥವರ ಮನವನ್ನು ಕಲಕುವಂತಿತ್ತು. ಮೃತದೇಹ ಮಣ್ಣು ಮಾಡುವ ಸಂದರ್ಭದಲ್ಲಿ ಗಂಡನ ಮೃತದೇಹದ ಬಳಿ ಬಂದ ಮೇಘನಾ ಚಿರುವನ್ನು ತಬ್ಬಿಕೊಂಡು ಹಣೆಯನ್ನು ಚುಂಬಿಸಿ ಕಣ್ಣೀರಿನ ವಿದಾಯ ಹೇಳಿದ ಹೃದಯ ವಿದ್ರಾವಕ ದೃಶ್ಯ ನೋಡುಗರಿಗೆ ಕಣ್ಣೀರಿನ ಧಾರೆಯನ್ನು ಹರಿಸಿತು.








