ಆರ್ಥಿಕತೆಯಲ್ಲಿ ರೆಡ್ ಝೋನ್ ನಲ್ಲಿರುವ ಪಾಕ್ ನಿಂದ ಭಾರತಕ್ಕೆ ಹಣದ ನೆರವು ನೀಡಲು ಸಿದ್ಧ ಎಂದು ಟ್ವೀಟ್

ಕರಾಚಿ, ಜೂನ್ 12: ಕೊರೊನಾ ಸೋಂಕನ್ನು ನಿಯಂತ್ರಿಸಲಾಗದೆ ಕಂಗೆಟ್ಟಿರುವ ಪಾಕಿಸ್ತಾನ ಇದೀಗ ಭಾರತಕ್ಕೆ ಸಹಾಯ ಮಾಡುವುದಕ್ಕೆ ತಯಾರಿರುವುದಾಗಿ ಹೇಳಿಕೊಂಡಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಮೇ 12 ರಂದು ಪ್ರಕಟಿಸಿರುವ ವರದಿಯನ್ನು ಉಲ್ಲೇಖಿಸಿ, ಶೇಕಡಾ 84ರಷ್ಟು ಭಾರತೀಯ ಕುಟುಂಬದ ಆದಾಯ ಲಾಕ್ ಡೌನ್ನಿಂದ ಇಳಿಕೆಯಾಗಿದೆ. ಶೇ.34ರಷ್ಟು ಭಾರತೀಯ ಕುಟುಂಬಗಳು ಹಣದ ಸಹಾಯವಿಲ್ಲದೆ ಒಂದು ವಾರ ಬದುಕುಳಿಯುವುದಿಲ್ಲ . ಹಾಗಾಗಿ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತಕ್ಕೆ ಪಾಕ್ ಸರ್ಕಾರವು ನಗದು ವರ್ಗಾವಣೆ ಮಾಡಲು ಸಿದ್ಧವಿರುವುದಾಗಿ ಟ್ವೀಟ್ ಮಾಡಿದೆ.

ಪಾಕ್ ಪ್ರಧಾನಿಯ ಸಹಾಯಹಸ್ತಕ್ಕೆ ಭಾರತ ತಿರುಗೇಟು ನೀಡಿದ್ದು, ಭಾರತ ಈಗಾಗಲೇ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಪಾಕಿಸ್ತಾನದ ಜಿಡಿಪಿ ಗಾತ್ರದಷ್ಟಿದೆ ಎಂದು ಹೇಳಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಪಾಕಿಸ್ತಾನವು ತಮ್ಮ ಜಿಡಿಪಿ ಶೇ 90% ರಷ್ಟು ಸಾಲವನ್ನು ಹೊಂದಿದೆ ಎಂಬುದನ್ನು ನೆನಪಿಸಿಕೊಳ್ಳುವುದು ಉತ್ತಮ. ಭಾರತದಲ್ಲಿ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಪಾಕಿಸ್ತಾನದ ಜಿಡಿಪಿಯಷ್ಟು ದೊಡ್ಡದಾಗಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, 20 ಲಕ್ಷ ಕೋಟಿ ರೂಪಾಯಿಗಳ ‘ಆತ್ಮನಿರ್ಭಾರ ಭಾರತ್’ ಪ್ಯಾಕೇಜ್ ಘೋಷಿಸುವ ಒಂದು ದಿನ ಮೊದಲು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಈ ವರದಿ ಪ್ರಕಟಿಸಿತ್ತು. ಇದೀಗ ಆ ವರದಿಯನ್ನು ಪ್ರಕಟಿಸಿ ಭಾರತಕ್ಕೆ ಸಹಾಯ ಮಾಡುವುದಾಗಿ ಹೇಳಿಕೊಂಡಿರುವ ಪಾಕ್ ಕೊರೊನಾ ಬಿಕ್ಕಟ್ಟು ಎದುರಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯ ಬಳಿ ಸಾಲಕ್ಕಾಗಿ ಅಂಗಲಾಚಿದೆ

ಪಾಕ್ ಒಂದೆಡೆ ತನ್ನ ದೇಶದಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕೊರೋನಾ ಸೋಂಕು ನಿಯಂತ್ರಣ ಮಾಡಲು ಸಾಧ್ಯ ವಾಗದೇ, ಮತ್ತೊದೆಡೆ ಕುಸಿದಿರುವ ಅರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಆಗದೆ ಪರದಾಡುತ್ತಿದೆ.








