Ronaldo ರೊನಾಲ್ಡೊ ತಂಡ ಬಿಡುವ ಬೆದರಿಕೆ ಹಾಕಿಲ್ಲ
ತಂಡದ ತಾರಾ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಂಡವನ್ನು ಬಿಟ್ಟು ಹೋಗುವ ಬೆದರಿಕೆ ಹಾಕಿಲ್ಲ ಎಂದು ಪೋರ್ಚುಗಲ್ ಫೂಟ್ಬಾಲ್ ಅಸೋಸಿಯೇಷನ್ ಸ್ಪಷ್ಟನೆ ನೀಡಿದೆ. ಉಹಾಪೋಹ ಸುದ್ದಿಗಳ ವಿರುದ್ಧ ಕಿಡಿಕಾರಿದೆ.
ಮೊನ್ನೆ ಸ್ವಿಟ್ಜರ್ಲೆಂಡ್ ವಿರುದ್ಧದ ಪ್ರಿಕ್ವಾರ್ಟರ್ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಆಡುವ ಹನ್ನೊಂದರೆ ಬಳಗದಲ್ಲಿ ಆಡಿಸದೇ ಡಗೌಟ್ನಲ್ಲಿ ಕೂರಿಸಲಾಗಿತ್ತು.
ಕೋಚ್ ಫರ್ನಾಂಡೊ ಸ್ಯಾಂತೋಸ್ ರೊನಾಲ್ಡೊ ಅವರನ್ನು ಕೈಬಿಟ್ಟು ಕಠಿಣ ನಿರ್ಧಾರ ಕೈಗೊಂಡಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ತಾರಾ ಆಟಗಾರನನ್ನು ಆಡಿಸದೇ ಕೂರಿಸಿದ್ದ ಬಗ್ಗೆ ಚೆರ್ಚೆಗಳು ನಡೆದಿದ್ದವು. ಇದಲ್ಲದೇ ಪಂದ್ಯ ಮುಗಿದ ನಂತರ ಗೆಲುವನ್ನು ಸಂಭ್ರಮಿಸದೇ ರೊನಾಲ್ಡೊ ಮೈದಾನದಿಂದ ಹೊರ ನಡೆದಿದ್ದರು.
ನಂತರ ರೊನಾಲ್ಡೊ ತಂಡದ ವಿರುದ್ಧ ಅಸಮಾಧಾನಗೊಂಡಿದ್ದು ತಂಡದಿಂದ ಹೊರ ನಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದೀಗ ಪೋರ್ಚುಗಲ್ ಫುಟ್ಬಾಲ್ ಸಂಸ್ಥೆ ರೊನಾಲ್ಡೊ ಯಾವುದೇ ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದೆ. ಭಾನುವಾರ ಮೊರಾಕ್ಕೊ ವಿರುದ್ಧ ಪೋರ್ಚುಗಲ್ ತಂಡ ಕ್ವಾರ್ಟರ್ ಫೈನಲ್ನಲ್ಲಿ ಕಾದಾಟ ನಡೆಸಲಿದೆ.
ಕೊನೆಗೂ ಮೌನ ಮುರಿದ ರೊನಾಲ್ಡೊ
ಸ್ವಿಟ್ಜರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮನ್ನು ಆಡಿಸದಿರುವ ಬಗ್ಗೆ ಅಸಮಾಧಾನಗೊಂಡಿದ್ದ ರೊನಾಲ್ಡೊ ಕೊನೆಗೂ ಮೌನ ಮುರಿದಿದ್ದಾರೆ.
ಸಾಮಾಜಿಕ ಜಾಲತಾಣ ಟ್ವೀಟರ್ನಲ್ಲಿ ಪೋರ್ಚುಗಲ್ ತಂಡವನ್ನು ಹೊರಗಿನ ಶಕ್ತಿಗಳು ಇಬ್ಬಾಗ ಮಾಡಲು ಸಾಧ್ಯಯವಿಲ್ಲ. ತಂಡ ನಂಬಿಕೆ ಮೇಲೆ ನಿಂತಿದೆ.
ಕನಸನ್ನು ನನಸು ಮಾಡುವುದಕ್ಕಾಗಿ ಕೊನೆಯವರೆಗೂ ಹೋರಾಡಲಿದೆ. ನಮ್ಮ ಮೇಲೆ ನಂಬಿಕೆ ಇಡಿ. ಪೋರ್ಚುಗಲ್ ತಂಡವನ್ನು ಬಲಪಡಿಸಿ ಎಂದು ಮನವಿ ಮಾಡಿದ್ದಾರೆ.
ಮೊರಾಕ್ಕೊ ವಿರುದ್ಧ ರೊನಾಲ್ಡೊ ಅನುಮಾನ ?
ನಾಳೆ ಮೊರಾಕ್ಕೊ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಸುಳಿವನ್ನು ಪೋರ್ಚುಗಲ್ ತಂಡದ ಕೋಚ್ ಫರ್ನಾಂಡೊ ಸ್ಯಾಂತೋಸ್ ನೀಡಿದ್ದಾರೆ. ರೊನಾಲ್ಡೊ ಸೇರಿ ಬೆಂಚ್ನಲ್ಲಿರುವ ಆಟಗಾರರನ್ನು ಬಳಸಿಕೊಳ್ಳಬಹುದು. ಆರಂಭದ ಸಾಲಿನಲ್ಲಿ ಇರದಿದ್ದರೆ. ನಂತರ ಅವರು ಆಡಬಹುದು ಎಂದು ಕೋಚ್ ಫರ್ನಾಂಡೊ ಸ್ಯಾಂತೋಸ್ ಹೇಳಿದ್ದಾರೆ.








