ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೈಲೆಂಟ್ ಆಗಿ ಮಗಳ ನಿಶ್ಚಿತಾರ್ಥಯನ್ನು ನೆರವೇರಿಸಿದ್ದಾರೆ. ಇಂದು ಡಿಕೆಶಿ ನಿವಾಸದಲ್ಲಿ ಐಶ್ವರ್ಯ ಹಾಗೂ ಅಮಾರ್ತ್ಯ ಹೆಗ್ಡೆ ನಿಶ್ಚಿತಾರ್ಥ ಸರಳವಾಗಿ ನಡೆಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಐಶ್ವರ್ಯ ಹಾಗೂ ಅಮಾರ್ತ್ಯ ಹೆಗ್ಡೆ ಪರಸ್ಪರ ಹಾರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಶಾಸ್ತ್ರ ಪೂರ್ಣಗೊಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕೇಳಿ ಬರುತ್ತಿದ್ದ ಮದುವೆಯ ಸಂಬಂಧದ ಮಾತುಗಳು ಈ ಮೂಲಕ ಅಧಿಕೃತವಾಗಿದ್ದು, ಆಗಸ್ಟ್ ತಿಂಗಳಲ್ಲಿ ವಿವಾಹ ನೆರವೇರಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಇದೆ. 
ಈ ಸರಳ ಸಮಾರಂಭಕ್ಕೆ ಡಿಕೆಶಿ ಕುಟುಂಬ ಸದಸ್ಯರು ಹಾಗೂ ಬೆರಳೆಣಿಕೆಯಷ್ಟು ಸಂಬಂಧಿಕರು ಮತ್ತು ಎಸ್.ಎಂ.ಕೃಷ್ಣ ದಂಪತಿ ಹಾಗೂ ಅವರ ಸಂಬಂಧಿಕರು ಸಾಕ್ಷಿಯಾದರು. ಇನ್ನು ಇಡೀ ಸಮಾರಂಭವನ್ನು ಅತ್ಯಂತ ಗುಪ್ತವಾಗಿ ಇರಿಸಿದ್ದ ಉಭಯ ಕುಟುಂಬಗಳು, ಇದನ್ನು ಕೇವಲ ಹೆಣ್ಣು ನೋಡುವ ಶಾಸ್ತ್ರ ಅನ್ನುವ ರೀತಿ ಬಿಂಬಿಸಲಾಗಿತ್ತು. ಆದರೆ ಇದೀಗ ಶಿವಕುಮಾರ್ ನಿವಾಸದ ಒಳಗಿನ ಸಮಾರಂಭದ ವಿಡಿಯೋ ವೈರಲ್ ಆಗಿದ್ದು, ಇದು ಹೆಣ್ಣು ನೋಡುವ ಶಾಸ್ತ್ರವಲ್ಲ, ಬದಲಾಗಿ ನಿಶ್ಚಿತಾರ್ಥ ಎಂಬ ಅಧಿಕೃತ ಮಾಹಿತಿ ಲಭಿಸಿದೆ. ಆದರೆ ಇದುವರೆಗೂ ಡಿ.ಕೆ.ಶಿವಕುಮಾರ್ ಅಥವಾ ಎಸ್.ಎಂ.ಕೃಷ್ಣ ಕುಟುಂಬದ ಮೂಲಗಳು ಈ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ.








