ಇತಿಹಾಸದಲ್ಲೇ ಮೊದಲ ಬಾರಿಗೆ ಹಜ್ ಯಾತ್ರೆ ರದ್ದು ಸಂಭವ
ರಿಯಾದ್, ಜೂನ್ 20: ಇತಿಹಾಸದಲ್ಲಿ ಮೊದಲ ಬಾರಿಗೆ ಇಸ್ಲಾಂ ಧರ್ಮೀಯರ ಪವಿತ್ರ ಹಜ್ ಯಾತ್ರೆ ರದ್ದಾಗುವ ಸಂಭವವಿದೆ. ಸೌದಿ ಅರೇಬಿಯಾ ಸರ್ಕಾರ ಕೊರೋನಾ ಬಿಕ್ಕಟ್ಟಿನ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ, ಹಜ್ ಯಾತ್ರೆಗೆ ಮಾಡಬೇಕಾದ ಸಕಲ ಸಿದ್ಧತೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದೆ.

ಸಾಮಾನ್ಯವಾಗಿ ಜುಲೈ ಅಂತ್ಯಕ್ಕೆ ಹಜ್ ಯಾತ್ರೆ ಜರಗುತ್ತಿದ್ದು, ಈ ಬಾರಿ ಕೊರೊನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ಹಜ್ ಯಾತ್ರೆಯಲ್ಲಿ ಪಾಲಿಸಬೇಕಾದ ಅನಿವಾರ್ಯತೆ ಇದೆ. ಪವಿತ್ರ ಯಾತ್ರೆಯಲ್ಲಿ ಕೊರೊನಾ ಮುನ್ನೆಚ್ಚರಿಕೆ ನಿಬಂಧನೆಗಳನ್ನು ಯಾತ್ರಾರ್ಥಿಗಳು ಪಾಲಿಸುವುದು ಕಷ್ಟ ಸಾಧ್ಯವಾದ ಕಾರಣ ಯಾತ್ರೆ ನಡೆಸಬೇಕೇ ಬೇಡವೇ ಎಂಬ ಗೊಂದಲದಲ್ಲಿ ಸೌದಿ ಸರ್ಕಾರವಿದ್ದು, ಆದಷ್ಟು ಬೇಗನೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೌದಿ ಅಧಿಕಾರಿ ತಿಳಿಸಿದ್ದಾರೆ.

ಈಗಾಗಲೇ ಲಾಕ್ ಡೌನ್ ನಿಯಮಗಳು ಸಡಿಲಗೊಂಡಿರುವ ಹಿನ್ನಲೆಯಲ್ಲಿ ಹಜ್ ಯಾತ್ರೆಗೆ ಅವಕಾಶ ನೀಡುವಂತೆ ಮುಸ್ಲಿಂ ರಾಷ್ಟ್ರಗಳು ಒತ್ತಡ ಹೇರಲಾರಂಭಿಸಿವೆ ಎಂದು ಹೇಳಲಾಗುತ್ತಿದ್ದು, ಮಾರ್ಚ್ ಅಂತ್ಯದಲ್ಲಿ ಹಜ್ ಯಾತ್ರೆಯ ಸಿದ್ಧತೆಗಳನ್ನು ಮುಂದೂಡುವಂತೆ ಸೌದಿ ಅರೇಬಿಯಾ ಮುಸ್ಲಿಂ ರಾಷ್ಟ್ರಗಳಿಗೆ ಸೂಚಿಸಿತ್ತು.
ಇಂಡೋನೇಷ್ಯಾ, ಮಲೇಷ್ಯಾ, ಸೆನೆಗಲ್, ಸಿಂಗಾಪುರ ದೇಶಗಳು ಈ ಬಾರಿ ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈಗಾಗಲೇ ಪ್ರಕಟಿಸಿರುವ ಕಾರಣ ಪ್ರತಿಬಾರಿಯಂತೆ ಯಾತ್ರಿಕರು ಈ ವರ್ಷ ಹಜ್ ಯಾತ್ರೆ ಕೈಗೊಳ್ಳುವ ನಿರೀಕ್ಷೆ ಇಲ್ಲ.








