ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ದಂಡ ಸಂಹಿತೆ(IPC), ಸಿಆರ್ಪಿಸಿ ಮತ್ತು ಎವಿಡೆನ್ಸ್ ಆ್ಯಕ್ಟ್ ಬದಲಿಗೆ ಹೊಸ ಕಾನೂನು ರೂಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ.
ಈ ಹೊಸ ಮಸೂದೆಯಂತೆ ದೇಶದ್ರೋಹ ಅಪರಾಧವನ್ನು ರದ್ದುಗೊಳಿಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಶಿಕ್ಷೆಯಾಗಿ ಸಮುದಾಯ ಸೇವೆ ಪರಿಚಯಿಸಲಾಗುತ್ತಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಮಸೂದೆ ಮಂಡಿಸಿ ಮಾತನಾಡಿ, ನೂತನ ಮಸೂದೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮಸೂದೆ(IPC), ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ(CRPC), ಭಾರತೀಯ ಸಾಕ್ಷ್ಯ ಕಾನೂನು(ಎವಿಡೆನ್ಸ್ ಆ್ಯಕ್ಟ್) ಇವುಗಳ ಹೆಸರು ಬದಲಾಯಿಸಲಾಗಿದೆ ಎಂದು ಹೇಳಿದ್ದಾರೆ.
ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ಸಮರ್ಪಕವಾಗಿ ಎದುರಿಸಲು ಹೊಸ ಶಿಕ್ಷೆ ಮಸೂದೆಯಲ್ಲಿ ಸೇರಿಸಲಾಗಿದೆ. ತನಿಖೆಯಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನದ ಬಳಕೆ, ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಸಮನ್ಸ್ ಜಾರಿ ಮಾಡುವುದು, ಡಿಜಿಟಲ್ ದಾಖಲೆಗಳನ್ನೂ ಸಾಕ್ಷ್ಯವನ್ನಾಗಿ ಪರಿಗಣಿಸುವ ಅವಕಾಶ ಇದೆ ಎಂದು ಹೇಳಿದ್ದಾರೆ.
1860 ರಿಂದ 2023ರವರೆಗೆ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯೂ ಬ್ರಿಟಿಷರು ರೂಪಿಸಿದ ಕಾನೂನಿನಂತೆ ಕಾರ್ಯನಿರ್ವಹಿಸುತ್ತಿತ್ತು. ಈ ಮೂರು ಹೊಸ ಕಾನೂನುಗಳಿಂದ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯಾಗಲಿದೆ ಎಂದು ಹೇಳಿದ್ದಾರೆ.








